ನ್ಯೂಸ್

ರಾಮನ ಗುಣಗಾನ ಮಾಡಿದ ರಾಹುಲ್‌ ಗಾಂಧಿ: ತಂಗಿಯ ನಂತರ ಅಣ್ಣನ ಟ್ವೀಟ್‌

ನವದೆಹಲಿ: ಎಲ್ಲಾ ತೊಡಕುಗಳನ್ನು ಮೀರಿ ಇನ್ನೇನು ರಾಮಮಂದಿರದ ಭೂಮಿಪೂಜೆ ನೆರವೇರಿಲಿದೆ ಎನ್ನುವಾಗಲೇ ನಿನ್ನೆಯಷ್ಟೇ ಟ್ವೀಟ್‌ ಮಾಡಿದ್ದ ಪ್ರಿಯಾಂಕಾ ಗಾಂಧಿ ರಾಮನನ್ನು ಹಾಡಿ ಹೊಗಳಿದ್ದು. ರಾಮ ಎಲ್ಲೆಲ್ಲೂ ಇದ್ದಾನೆ, ಎಲ್ಲರೊಂದಿಗೂ ಇದ್ದಾನೆ ಎಂದು ಹೇಳಿದ್ದರು. ಅಯೋಧ್ಯೆಯ ನಿಧಿಯಾಗಿದ್ದ ರಾಮಮಂದಿರ ಭೂಮಿ ಪೂಜೆ ಸಮಾರಂಭ, ರಾಮನ ಸಂದೇಶಕ್ಕೆ ಅನುಗುಣವಾಗಿ ರಾಷ್ಟ್ರೀಯ ಏಕತೆ, ಸಹೋದರತ್ವ ಮತ್ತು ಸಾಂಸ್ಕೃತಿಕ ಸಾಮರಸ್ಯದ ಆಚರಣೆಯಾಗಲಿದೆ ಎಂದು ಹೇಳಿದ್ದರು.

ಇದರ ಬೆನ್ನಲ್ಲೇ ಇದೀಗ ರಾಹುಲ್‌ ಗಾಂಧಿ, ಭೂಮಿಪೂಜೆ ಮುಗಿದ ಮೇಲೆ ಟ್ವೀಟ್‌ ಮಾಡಿದ್ದು, ರಾಮನ ಬಗ್ಗೆ ಹಾಡಿ ಹೊಗಳಿದ್ದಾರೆ. "ಮರ್ಯಾದಾ ಪುರುಷೋತ್ತಮ ಶ್ರೀರಾಮ ಪ್ರೀತಿಯ ಪ್ರತೀಕ, ದ್ವೇಷ ಇರುವಲ್ಲಿ ಇರನು. ರಾಮ ಸಹಾನುಭೂತಿ, ಅವನು ಎಂದಿಗೂ ಕ್ರೌರ್ಯಕ್ಕೆ ಆಸ್ಪದ ಕೊಡುವುದಿಲ್ಲ. ರಾಮ ನ್ಯಾಯ, ಅವನು ಎಂದಿಗೂ ಅನ್ಯಾಯದ ಜತೆ ಇರಲ್ಲ ಎಂದು ಹೇಳಿದ್ದಾರೆ.

ಭಗವಾನ್ ರಾಮ ಅತ್ಯುತ್ತಮ ಮಾನವ ಗುಣಗಳ ಪ್ರತೀಕ. ಆ ಗುಣಗಳು ನಮ್ಮ ಮನಸ್ಸಿನ ಆಳದಲ್ಲಿ ಮಾನವೀಯತೆಯ ತಿರುಳನ್ನು ಬೆಳೆಸುತ್ತವೆ. ರಾಮ ಎಂದರೆ ಪ್ರೀತಿಯ ಸಂಕೇತ, ಅಲ್ಲಿ ಎಂದಿಗೂ ಕ್ರೂರತನ ಇರುವುದಿಲ್ಲ’ ಎಂದು ಹೇಳಿದ್ದಾರೆ.

ಈ ಟ್ವೀಟ್‌ ಅನ್ನು ಇದಾಗಲೇ 14 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್‌ ಮಾಡಿದ್ದು, 60 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿವೆ.