

ಬೆಂಗಳೂರು: ಇಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಮಂದಿರದ ಭೂಮಿ ಪೂಜೆಯ ಸಂದರ್ಭದಲ್ಲಿ ತಯಾರಿಸಲಾಗುವ ಪ್ರಸಾದದಕ್ಕೂ ಕರ್ನಾಟಕಕ್ಕೂ ತೀರಾ ಹತ್ತಿರದ ಸಂಬಂಧವಿದೆ.
ಇಂದು ಭೂಮಿಪೂಜೆಯ ನಂತರ ನೀಡಲಾಗುವ ರಘುಪತಿ ಲಡ್ಡು ಸೇವಿಸಿದವರೆಲ್ಲರೂ ಕರ್ನಾಟಕದ ನಂದಿನಿ ತುಪ್ಪದ ರುಚಿಯನ್ನು ಸವಿಯುತ್ತಾರೆ! ಹೌದು. ಲಡ್ಡು ಪ್ರಸಾದಕ್ಕೆ ಕರ್ನಾಟಕದ ನಂದಿನಿ ತುಪ್ಪವನ್ನು ಬಳಸಲಾಗುತ್ತಿದೆ. ರಾಜ್ಯದ ಹೈನುಗಾರರು ಈ ಮೂಲಕ ರಾಮಮಂದಿರಕ್ಕೆ ಕೊಡುಗೆಯನ್ನೂ ನೀಡುತ್ತಿದ್ದಾರೆ.
ಬೆಂಗಳೂರಿನಿಂದ ಸುಮಾರು 1,800 ಕಿ.ಮೀ ದೂರ ಇರುವ ಅಯೋಧ್ಯೆಗೆ ಇದಾಗಲೇ ಸುಮಾರು ಒಂದೂವರೆ ಲಕ್ಷದಷ್ಟು ಲಡ್ಡುಗಳನ್ನು ತಯಾರಿಸಲು ನಂದಿನಿ ತುಪ್ಪವನ್ನು ಈಗಾಗಲೇ ಕಳುಹಿಸಿಕೊಡಲಾಗಿದೆ. ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಇದಾಗಲೇ 20 ಸಾವಿರ ಕೆ.ಜಿಯಷ್ಟು ತುಪ್ಪವನ್ನು ಕಳುಹಿಸಿದೆ.
ಪಟ್ನಾದಲ್ಲಿರುವ ಹನುಮಾನ್ ದೇವಾಲಯದಲ್ಲಿ ಲಡ್ಡು ಪ್ರಸಾದವನ್ನು ತಯಾರು ಮಾಡಲಾಗುತ್ತಿದ್ದು, ಇದಾಗಲೇ ತುಪ್ಪ ಅವರ ಕೈಸೇರಿದ್ದು, ಲಡ್ಡು ರೆಡಿ ಆಗಿವೆ. 15 ಕೆ.ಜಿ. ತೂಕದ ಟಿನ್‌ಗಳಲ್ಲಿ ತುಂಬಿರುವ ತುಪ್ಪಗಳನ್ನು ಟ್ರಕ್ ಮೂಲಕ ಕಳುಹಿಸಿಕೊಡಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಮಾಹಿತಿ ನೀಡಿದ್ದಾರೆ.
ಅಷ್ಟಕ್ಕೂ ಕರ್ನಾಟಕದ ನಂದಿನಿ ತುಪ್ಪಕ್ಕೂ, ರಾಮಮಂದಿರಕ್ಕೂ ನಂಟು ಹೇಗೆ ಬಂತಪ್ಪ ಎಂಬ ಪ್ರಶ್ನೆ ಕಾಡುವುದು ಸಹಜ. ಅದಕ್ಕೆ ಉತ್ತರ ಇಷ್ಟೇ. ಪಟ್ನಾದಲ್ಲಿರುವ ಹನುಮಾನ ದೇವಾಲಯದ ವ್ಯವಸ್ಥಾಪಕರು ಶೇಷಾದ್ರಿಯವರು. ಈ ದೇವಾಲಯದ ಇನ್ನೊಂದು ಶಾಖೆ ಅಯೋಧ್ಯೆಯಲ್ಲಿದೆ. ಶೇಷಾದ್ರಿ ಅವರು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನವರು.
ಇದನ್ನೂ ಓದಿ: LIVE: ಶ್ರೀರಾಮ ಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ..
ಶೇಷಾದ್ರಿಯವರು ಪಟ್ನಾದ ದೇವಾಲಯಕ್ಕೂ ಮುನ್ನ ತಿರುಪತಿಯ ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದರು, ತಿರುಪತಿಯಲ್ಲಿ ಲಡ್ಡು ಮಾಡಲು ನಂದಿನಿ ತುಪ್ಪ ಉಪಯೋಗಿಸುವುದರ ಬಗ್ಗೆ ಅವರಿಗೆ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಲಡ್ಡು ಸ್ವಾದಿಷ್ಟವಾಗಲು ನಂದಿನಿ ತುಪ್ಪವನ್ನು ಬಳಕೆ ಮಾಡಬಹುದು ಎಂದು ಅವರು ಸಲಹೆ ಇತ್ತಿದ್ದಾರೆ.
ಸುಮಾರು 60 ಮಂದಿ ಸಿಬ್ಬಂದಿ 1.5 ಲಕ್ಷ ಲಡ್ಡು ತಯಾರಿಸಲಿದ್ದಾರೆ, ಹಸುವಿನ ಹಾಲಿನ ಬದಲಾಗಿ ನಂದಿನಿ ತುಪ್ಪವನ್ನು ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
ಮಹಾದೇವ್ ಮಂದಿರ ಟ್ರಸ್ಟ್ ಈ ಒಟ್ಟು ಲಡ್ಡುಗಳ ಪೈಕಿ ಅಯೋಧ್ಯೆಯಲ್ಲಿರುವ ಭವ್ಯ ರಾಮ ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸುಮಾರು 51 ಸಾವಿರ ಲಡ್ಡುಗಳನ್ನು ಹಸ್ತಾಂತರಿಸಲಿದೆ.