ನ್ಯೂಸ್

ಮಕ್ಕಳನ್ನು ಶಾಲೆಯಿಂದ ಬಿಡಿಸಲು ಹಲವು ಪಾಲಕರ ನಿರ್ಧಾರ: ಅವರ ಒಲವು ಎತ್ತ ಗೊತ್ತಾ?

ಬೆಂಗಳೂರು: ಬದಲಾವಣೆ ಜಗದ ನಿಯಮ ಎನ್ನುವುದು ಹಳೆಯ ಮಾತು. ಕರೊನಾ ವೈರಸ್​ ಈ ಮಾತನ್ನು ನಿಜ ಮಾಡುತ್ತಿದೆ. ಬಹುತೇಕ ಎಲ್ಲರ ಜೀವನದಲ್ಲಿಯೂ ಒಂದೊಂದು ರೀತಿಯ ಬದಲಾವಣೆಗಳನ್ನು ಕರೊನಾ ಮಾಡಿದೆ. ಅದು ಸಕಾರಾತ್ಮಕವಾಗಿಯೂ ಇರಬಹುದು, ನಕಾರಾತ್ಮಕವಾಗಿಯಾದರೂ ಇರಬಹುದು.

ಯಾವುದು ಬೇಡ ಎನ್ನುತ್ತಿದ್ದೆವೋ, ಯಾವುದನ್ನು ಮೂಲೆಗುಂಪು ಮಾಡಲು ನೋಡುತ್ತಿದ್ದೇವೋ ಅದನ್ನೇ ಅಪ್ಪಿಕೊಳ್ಳುವಂಥ ಪರಿಸ್ಥಿತಿಯನ್ನು ಕರೊನಾ ತಂದಿರುವುದಂತೂ ದಿಟ. ವೈದ್ಯಕೀಯ, ಶಿಕ್ಷಣ ಎಲ್ಲಾ ಕ್ಷೇತ್ರಗಳಲ್ಲಿಯೂ ಇದೀಗ ಬದಲಾವಣೆಯ ಗಾಳಿ ಬೀಸತೊಡಗಿದೆ.

ನಮ್ಮ ಶಿಕ್ಷಣ ಪದ್ಧತಿ ಸರಿಯಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಹಾಗೆಂದು ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರಲು ಆದೀತೆ ಎನ್ನುವವರೇ ಎಲ್ಲಾ. ಎಷ್ಟೇ ಶುಲ್ಕವಾದರೂ ಸೈ (ಕೆಲವರಿಗೆ ಪ್ರೇಸ್ಟೀಜ್​ ಪ್ರಶ್ನೆಯಿಂದಾಗಿ) ಖಾಸಗಿ ಶಾಲೆಗಳತ್ತಲೇ ಒಲವು ತೋರಿಸುವ ಪಾಲಕರೇ ಹೆಚ್ಚು.

ಆದರೆ ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಹಲವು ಪಾಲಕರು ತಮಗೆ ಖಾಸಗಿ ಶಾಲೆಯೂ ಬೇಡ, ಸರ್ಕಾರಿ ಶಾಲೆಯೂ ಬೇಡ ಎನ್ನುತ್ತಿದ್ದಾರೆ. ಅವರೀಗ ಒಲವು ತೋರುತ್ತಿರುವುದು ಎತ್ತ? ಅದೇ ಹೋಮ್​ ಸ್ಕೂಲಿಂಗ್​.

ಹೌದು. ಕೊನೆಯ ಪಕ್ಷ ಈ ವರ್ಷವಾದರೂ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವುದಿಲ್ಲ ಎನ್ನುತ್ತಿರುವ ಹಲವರು ಶಾಲೆಯಿಂದ ಬಿಡಿಸಿ ಹೋಮ್​ ಸ್ಕೂಲಿಂಗ್​ನತ್ತ ಗಮನ ಹರಿಸುತ್ತಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಖಾಸಗಿ ಶಾಲೆಗಳ ದುಬಾರಿ ಶುಲ್ಕವಲ್ಲ, ಬದಲಿಗೆ ಆನ್​ಲೈನ್​ ಕ್ಲಾಸ್​. ಕರೊನಾ ವೈರಸ್​ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಖಾಸಗಿ ಶಾಲೆಗಳು ಆನ್​ಲೈನ್​ ಕ್ಲಾಸ್​ ಶುರು ಮಾಡಿಕೊಂಡಿವೆ. ಶಾಲೆಗೆ ಹೋಗುವ ಬದಲು ಮಕ್ಕಳು ಮನೆಯಲ್ಲಿಯೇ ಇರುವ ಬಗ್ಗೆ ಪಾಲಕರಿಗೆ ಮೊದಮೊದಲು ಖುಷಿಯೇ ಆಗಿತ್ತು. ಆದರೆ ಅದೇ ಈಗ ಹಿಂಸೆಯ ರೂಪ ತಾಳುತ್ತಿದೆ.

3-4 ವರ್ಷಗಳ ಪುಟಾಣಿಗಳಿಗೂ ಹಲವು ಖಾಸಗಿ ಶಾಲೆಗಳು ಆನ್​ಲೈನ್​ ಕ್ಲಾಸ್​ ಶುರು ಮಾಡಿವೆ. ದಿನದ ನಾಲ್ಕು ಗಂಟೆ ಕ್ಲಾಸ್​ ಇರುತ್ತವೆ. ಊಟಕ್ಕೆ ಅರ್ಧ ಗಂಟೆ ಗ್ಯಾಪ್​ ಅಷ್ಟೇ. ಇದರ ಜತೆಗೆ, ಹೋಮ್​ವರ್ಕ್​ ಮಾಡಿಸುವಂತೆ ಪಾಲಕರ ಮೇಲೆ ಒತ್ತಡ ಹೆಚ್ಚಾಗಿದೆ. ಮಾತ್ರವಲ್ಲದೇ, ಆನ್​ಲೈನ್​ ಕ್ಲಾಸ್​ನಲ್ಲಿ ಕೆಲವು ಮಕ್ಕಳು ಗ್ರಹಿಸಲು ಸಾಧ್ಯವೇ ಆಗುತ್ತಿಲ್ಲ. ಆದರೆ ಎಲ್ಲ ಮಕ್ಕಳೂ ಸೂಪರ್​ಫಾಸ್ಟ್​ ಇರಬೇಕು ಎಂದು ಬಯಸುವ ಶಿಕ್ಷಕರು, ನಿಧಾನವಾಗಿ ಕಲಿಯುವ ಮಕ್ಕಳತ್ತ ಗಮನವೇ ಹರಿಸುವುದಿಲ್ಲ.

ಈ ಸಮಸ್ಯೆ ಶಾಲೆಗೆ ಹೋಗುವ ಮಕ್ಕಳಲ್ಲಿಯೂ ಇದ್ದದ್ದೇ. ಆದರೆ ಆನ್​ಲೈನ್​ ಕ್ಲಾಸ್​ನಿಂದಾಗಿ ಪರಿಸ್ಥಿತಿ ಇನ್ನೂ ಹತೋಟಿ ಮೀರಿದೆ ಎನ್ನುವುದು ಪಾಲಕರ ಅಭಿಮತ. ಕೆಲವು ಪಾಲಕರಿಗೂ ವರ್ಕ್​ ಫ್ರಂ ಹೋಂ ಇದೆ. ಆದರೆ ಇದೇ ವೇಳೆ ಆನ್​ಲೈನ್​ ಕ್ಲಾಸ್​ ಇರುವುದರಿಂದ ಅದೇ ಸಮಯದಲ್ಲಿ ಪಾಲಕರು ಮಕ್ಕಳತ್ತ ಗಮನ ಕೊಡುವಂತೆ, ಅವರಿಗೆ ಹೋಂ ವರ್ಕ್​ ಮಾಡಿಸುವಂತೆ ಕೆಲವು ಶಾಲೆಗಳು ಒತ್ತಡ ಹೇರುತ್ತಿರುವುದರಿಂದ ತುಂಬಾ ಸಮಸ್ಯೆಯಾಗಿದೆ. ಪೋರ್ಟಲ್​ಗಳಲ್ಲಿ ಹೋಮ್​ವರ್ಕ್​ ಸಬ್​ಮಿಟ್​ ಮಾಡುವಂತೆ ಪದೇ ಪದೇ ಕೆಲವು ಶಾಲೆಗಳು ಒತ್ತಡ ಹೇರುತ್ತಿರುವುದು ಪಾಲಕರಿಗೆ ಹಿಂಸೆ ತರುತ್ತಿದೆ.

ಇದೂ ಹೋಗಲಿ ಎಂದರೆ ಮಕ್ಕಳನ್ನು ಮೊಬೈಲ್​, ಕಂಪ್ಯೂಟರ್​ ಸ್ಕ್ರೀನ್​ಗಳಿಂದ ಕಷ್ಟಪಟ್ಟು ದೂರವಿಟ್ಟ ಪಾಲಕರಿಗೂ ಆನ್​ಲೈನ್​ ಕ್ಲಾಸ್​ ನುಂಗಲಾಗದ ತುಪ್ಪವಾಗಿ ಪರಿಣಮಿಸಿದೆ. ಪುಟಾಣಿಗಳ ಸ್ಕ್ರೀನ್​ಟೈಂ ಹೆಚ್ಚುತ್ತಿರುವ ಕಾರಣ, ಇದು ಅವರ ದೃಷ್ಟಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದು ಹಲವರು ಅಪ್ಪ-ಅಮ್ಮನ ಆರೋಪ.

ಇನ್ನು ದುಬಾರಿ ಶುಲ್ಕಗಳದ್ದಂತೂ ಗೊತ್ತೇ ಇದೆ. ಕರೊನಾದಿಂದಾಗಿ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದ ಅವರು ಕೂಡ ತಮ್ಮ ಮಕ್ಕಳನ್ನುಶಾಲೆಯಿಂದ ಬಿಡಿಸಲು ತೀರ್ಮಾನಿಸಿದ್ದು, ಮಕ್ಕಳಿಗೆ ಹೋಮ್​ ಸ್ಕೂಲಿಂಗ್​ ಮಾಡಲು ನಿರ್ಧರಿಸಿದ್ದಾರೆ.

ಹೋಂ ಸ್ಕೂಲಿಂಗ್​ ಪುಟ ಶುರು: ಅತ್ಯಧಿಕ ಪಾಲಕರು ಹೋಂಸ್ಕೂಲ್​ನತ್ತ ಒಲವು ತೋರಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹೋಂ ಸ್ಕೂಲ್​ ಪುಟವನ್ನು ಸಂಧ್ಯಾ ವಿಶ್ವ ಎನ್ನುವವರು ತೆರೆದಿದ್ದಾರೆ. ತಮ್ಮ ಮಕ್ಕಳನ್ನು ಹೋಂಸ್ಕೂಲ್​ ಮಾಡಿಸಲು ಬಯಸುತ್ತಿರುವವರ ಸಂಖ್ಯೆ ತಮಗೇ ಅಚ್ಚರಿ ಎನಿಸುವಷ್ಟು ಆಗಿದೆ. ನನಗೆ ಪ್ರತಿದಿನವೂ ನೂರಾರು ಕರೆಗಳು ಬರುತ್ತಿವೆ ಎನ್ನುತ್ತಾರೆ ಸಂಧ್ಯಾ.

ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರಿಷಿಕೇಶ್ ಬಿ.ಎಸ್ ಕೂಡ ಹೋಂ ಸ್ಕೂಲ್​ನಿಂದ ಮಕ್ಕಳಲ್ಲಿ ಉತ್ಸಾಹ ಮೂಡುತ್ತದೆ, ಇದು ಒಳ್ಳೆಯ ಬೆಳವಣಿಗೆ ಎನ್ನುತ್ತಾರೆ. ಅದಕ್ಕೇ ಅಲ್ಲವೆ ಟಿ.ಪಿ.ಕೈಲಾಸಂ ಅವರು ಹೇಳಿರುವುದು ಮಕ್ಕಳಿಸ್ಕೂಲ್ ಮನೇಲಲ್ವೇ? ಎಂದು!

ಏನಿದು ಹೋಮ್​ ಸ್ಕೂಲಿಂಗ್​: ಮನೆಯಲ್ಲಿಯೇ ಪಾಲಕರು ಮಕ್ಕಳಿಗೆ ಪಾಠ ಮಾಡುವುದೇ ಹೋಂ ಸ್ಕೂಲಿಂಗ್​. ಮನೆಯಲ್ಲಿ ಕಲಿಯುವ ಮಕ್ಕಳಿಗಾಗಿಯೇ ಅಧಿಕೃತವಾಗಿ ಪರೀಕ್ಷೆಗಳನ್ನೂ ನಡೆಸುವ ವ್ಯವಸ್ಥೆ ಶಿಕ್ಷಣ ಸಂಸ್ಥೆಗಳಿಂದಲೇ ಇದೆ. ಇದಾಗಲೇ ಹಲವಾರು ಮಂದಿ ತಮ್ಮ ಮಕ್ಕಳಿಗೆ ಹೋಮ್​ ಸ್ಕೂಲಿಂಗ್​ನಲ್ಲಿಯೇ ತರಬೇತಿ ನೀಡಿದ್ದಾರೆ. ಇವರಿಗೆ ಭವಿಷ್ಯದಲ್ಲಿ ಉದ್ಯೋಗಾವಕಾಶ ಸೇರಿದಂತೆ ಯಾವುದೇ ಕಾರಣಕ್ಕೂ ತೊಂದರೆಯಾಗುವುದಿಲ್ಲ. ಅಂಕಪಟ್ಟಿಗಳೂ ಇರುವ ಹಿನ್ನೆಲೆಯಲ್ಲಿ ಸಮಸ್ಯೆಯಾಗುವುದಿಲ್ಲ.