ನ್ಯೂಸ್

ನಡುರಾತ್ರಿ ಮೊಳಗಿತು 'ಪಾಕಿಸ್ತಾನ್‌ ಜಿಂದಾಬಾದ್‌' ಘೋಷಣೆ- ಮಲಗಿದ್ದವರೆಲ್ಲಾ ತಬ್ಬಿಬ್ಬು!

ನವದೆಹಲಿ: ನಿನ್ನೆ ನಡುರಾತ್ರಿಯಲ್ಲಿ ದೆಹಲಿಯ ಖಾನ್‌ ಮಾರುಕಟ್ಟೆ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೆಲವರು ಘೋಷಣೆ ಕೂಗುತ್ತಾ ಬೀದಿಬೀದಿಗಳಲ್ಲಿ ಸುತ್ತಿದರು.

ನಡುರಾತ್ರಿ ಸುಮಾರು ಒಂದು ಗಂಟೆಯ ವೇಳೆ ಎಲ್ಲೆಡೆ ಮೌನವಾಗಿದ್ದ ಸಂದರ್ಭದಲ್ಲಿ ಈ ರೀತಿ ಘೋಷಣೆ ಕೂಗುತ್ತಿದ್ದಂತೆಯೇ ಮಲಗಿದ್ದವರೆಲ್ಲಾ ಏನಾಯಿತೆಂದು ತಿಳಿಯದೇ ತಬ್ಬಿಬ್ಬಾಗಿ ಹೋಗಿದ್ದಾರೆ. ನಂತರ ತಮಗೇನಾದರೂ ತೊಂದರೆಯಾಗುತ್ತಿದೆಯೇ, ಹೀಗೆಲ್ಲಾ ಕೂಗುತ್ತಿದ್ದವರು ಯಾರು ಎಂದೆಲ್ಲಾ ತಿಳಿಯದ ಕೆಲವು ವ್ಯಕ್ತಿಗಳು ಬೆದರಿ ಸಹಾಯವಾಣಿಗೆ ಕರೆ ಮಾಡಿದ್ದಾರೆ.

ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.

ರಾತ್ರಿ ದೆಹಲಿ ಖಾನ್ ಮಾರುಕಟ್ಟೆಯಲ್ಲಿ ದೇಶದ್ರೋಹಿ ಘೋಷಣೆ ಕೂಗಿರುವ ಬಗ್ಗೆ ದೂರು ದಾಖಲಿಸಲಾಗಿತ್ತು. ಸಹಾಯವಾಣಿಗೆ ಕೆಲವರು ಕರೆ ಮಾಡಿದ್ದರು. ನಂತರ ಸ್ಥಳಕ್ಕೆ ಧಾವಿಸಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿಯ ತುಘಲಕ್ ರಸ್ತೆಯಲ್ಲಿ ಖಾನ್ ಮಾರುಕಟ್ಟೆ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನಲ್ಲಿ ಬೈಕ್‌ನಲ್ಲಿ ಇವರೆಲ್ಲಾ ಸಂಚರಿಸುತ್ತಿದ್ದರು. ಅವರ ಬೆನ್ನುಹತ್ತಿ ಈ ವೇಳೆ ಬೈಕಿನಲ್ಲಿದ್ದ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ನಡುರಾತ್ರಿ ಈ ರೀತಿ ಘೋಷಣೆ ಕೂಗಿರುವ ಹಿಂದಿನ ಉದ್ದೇಶವನ್ನು ಕಲೆಹಾಕಲಾಗುತ್ತಿದೆ ಜತೆಗೆ ಇವರ ಹಿನ್ನೆಲೆ ತಿಳಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.