ನ್ಯೂಸ್

ಪತ್ನಿ ಮೊಬೈಲ್​ನಲ್ಲಿ, ತಿನ್ನೋದ್ರಲ್ಲಿ, ಅಲಂಕಾರ ಮಾಡಿಕೊಳ್ಳೋದ್ರಲ್ಲಿ ಕಾಲ ಕಳೀತಾಳೆ: ವಿಚ್ಛೇದನ ಸಿಗತ್ತಾ?

ಪ್ರಶ್ನೆ: ನನ್ನ ಹೆಂಡತಿ ತುಂಬಾ ದಪ್ಪ. ಓದಿದ್ದರೂ ಕೆಲಸಕ್ಕೆ ಹೋಗುವುದಿಲ್ಲ ಎನ್ನುತ್ತಾಳೆ. ಮನೆಯಲ್ಲೇ ಕೂತು ಸದಾ ಸೋಮಾರಿಯಾಗಿರುತ್ತಾಳೆ. ಸದಾ ತಿನ್ನುವುದು, ಫೋನಲ್ಲಿ ಮೆಸೇಜ್‌ ಹಾಕುತ್ತಿರುವುದು, ಅಲಂಕಾರ ಮಾಡಿಕೊಳ್ಳುವುದು, ತಿರುಗಾಡುವುದು ಇಲ್ಲದೇ ಹೋದರೆ ಮಲಗಿರುವುದು ಇಷ್ಟೇ ಅವಳು ಮಾಡುವುದು. ಮನೆಯ ಕೆಲಸವೆಲ್ಲಾ ನಾನೇ ಮಾಡಬೇಕು. ಏನಾದರೂ ಹೇಳಿದರೆ ಕಿರಿಚಾಡುತ್ತಾಳೆ. ನಾನು ಸಣ್ಣ ಆಗುತ್ತೇನೆ, ನಾನು ಕೆಲಸಕ್ಕೆ ಹೋಗುತ್ತೇನೆ ಎಂದು ನಂಬಿಸಿ ಮದುವೆ ಆದಳು. ಈಗ ಅವಳು ಆ ವಿಷಯ ಮಾತಾಡುವುದೇ ಇಲ್ಲ. ನನಗೆ ಅವಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ವಿಚ್ಛೇದನ ಪಡೆಯಬಹುದೇ?

ಉತ್ತರ: ಕ್ರೂರತೆಯ ಆಧಾರದ ಮೇಲೆ ವಿಚ್ಛೇದನಕ್ಕೆ ದಂಪತಿಗಳಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ವಿಚ್ಛೇದನದ ಪ್ರಕರಣ ದಾಖಲು ಮಾಡಬಹುದು. ಆದರೆ ನೀವು ಹೇಳುವ ವಿಷಯಗಳಿಂದ ನಿಮಗೆ ಸಹಿಸಲಾಗದ ಕ್ರೂರತೆ ಆಗಿದೆ ಎನ್ನುವುದನ್ನು ನೀವು ನ್ಯಾಯಾಲಯದಲ್ಲಿ ಸಾಬೀತು ಪಡಿಸಬೇಕಾಗುತ್ತದೆ.

ಕ್ರೂರತೆ ಎಂದರೆ ಇದೇ ಎಂದು ಕಾನೂನಿನಲ್ಲಿ ತಿಳಿಸಿಲ್ಲ. ಯಾವುದು ಕ್ರೂರತೆ ಯಾವುದು ಕ್ರೂರತೆ ಅಲ್ಲ ಎನ್ನುವುದನ್ನು ದಂಪತಿಗಳ ಸಾಮಾಜಿಕ, ಸಾಂಸ್ಕೃತಿಕ ಸ್ಥಾನ ಮಾನ, ಬೆಳೆದ ರೀತಿ, ಅನುಸರಿಸುತ್ತಿರುವ ಜೀವನ ಶೈಲಿ ಅಳವಡಿಸಿಕೊಂಡಿರುವ ಜೀವನದ ರೀತಿ ನೀತಿಗಳು ಆಚಾರ ವಿಚಾರ, ವಿದ್ಯಾಭ್ಯಾಸ , ಕೆಲಸ , ಪದವಿ ಇವೆಲ್ಲದರ ಆಧಾರದ ಮೇಲೆ ಪರಿಗಣಿಸಲಾಗುತ್ತದೆ. ಪತ್ನಿ ದಪ್ಪ ಎನ್ನುವ ಕಾರಣದಿಂದ ನೀವು ವಿಚ್ಛೇದನ ಪಡೆಯಲು ಆಗುವುದಿಲ್ಲ. ನಿಮ್ಮ ವಿಷಯದಲ್ಲಿ ನೀವು ಹೇಳಿದ ವಿಷಯಗಳನ್ನೆಲ್ಲ ನ್ಯಾಯಾಲಯ ದೈನಂದಿನ ಜೀವನದ ಆಗುಹೋಗುಗಳು, ಏರು ಪೇರುಗಳು ಎಂದು ನಿರ್ಧರಿಸಿದರೆ ನಿಮಗೆ ವಿಚ್ಛೇದನ ಸಿಗದೆಯೂ ಹೋಗಬಹುದು.

ನ್ಯಾಯಾಲಯಕ್ಕೆ ಹೋಗುವ ಮುಂಚೆ ನಿಮ್ಮ ಪತ್ನಿಯ ಜತೆ ವಿವಾಹ ಸಂಧಾನಕಾರರ ಹತ್ತಿರ ಹೋಗಿ. ನಿಮ್ಮ ಪತ್ನಿಗೆ ಸಕಾರಾತ್ಮಕ ವಿಷಯಗಳಲ್ಲಿ ಆಸಕ್ತಿ ಮೂಡುವಂತೆ ಸಲಹೆ ಕೊಡುತ್ತಾರೆ. ತೂಕ ತಗಿಸುವ ಬಗ್ಗೆ ವಿಷಯ ತಜ್ಙರ ಸಲಹೆ ಪಡೆದು ಆಕೆಯನ್ನು ವ್ಯಾಯಾಮ ಇತ್ಯಾದಿ ಮಾಡಲು ಮನಸ್ಸು ಮಾಡುವಂತೆ ಪ್ರಯತ್ನಿಸುತ್ತಾರೆ.

ಇದರಿಂದ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ಸಣ್ಣ ಕೆಲಸವಾದರೂ ಚಿಂತೆಯಿಲ್ಲ ಆಕೆ ಕೆಲಸಕ್ಕೆ ಹೋಗುವುದರಿಂದ ಆಕೆಗೆ ಆಗುವ ಅನುಕೂಲಗಳೇನು ಎನ್ನುವುದನ್ನು ಆಕೆ ತಿಳಿದುಕೊಳ್ಳಲು ಸಹಾಯ ಮಾಡುತ್ತಾರೆ. ಮೊದಲು ಇದನ್ನು ಪ್ರಯತ್ನಿಸಿ , ಸಫಲವಾಗದೇ ಹೋದರೆ ಆ ನಂತರ ಪ್ರಕರಣ ದಾಖಲಿಸಲು ಮುಂದಾಗಿ. ನಿಮ್ಮ ಪತ್ನಿಗೆ ಎಲ್ಲ ವಿಷಯ ತಿಳಿಸಿಯೇ ಮುಂದುವರೆಯಿರಿ.

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ   https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/