ನ್ಯೂಸ್

ಹೋಳಿಯ ದಿನ ಹೀಗೆ ಮಾಡಿದ್ರೆ ಮದ್ವೆಯಾಗುತ್ತೆ ಎಂದು ಬಾಲಕಿಯನ್ನು ಅಪಹರಿಸಿದ! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಾ...

ನೋಯ್ಡಾ: ಮದುವೆಗೆ ಹುಡುಗಿ ಸಿಗದೇ ಇರುವುದು ಹೊಸ ವಿಷಯವೇನಲ್ಲ. ಈಗಿನ ಹುಡುಗಿಯರು ಇಡುವ ಬೇಡಿಕೆಗಳನ್ನು ಈಡೇರಿಸುವುದು ದೊಡ್ಡ ಸವಾಲಿನ ಕೆಲಸವೇ ಆಗಿರುವ ಕಾರಣ, ಅವುಗಳನ್ನು ಈಡೇರಿಸಲು ಆಗದೇ ಎಷ್ಟೋ ಯುವಕರು ಅವಿವಾಹಿತರಾಗಿಯೇ ಉಳಿದುಬಿಡುತ್ತಿದ್ದಾರೆ.

ಆದ್ದರಿಂದ ತಮ್ಮ ಮದುವೆ ಯಾವಾಗ ಎಂದು ಕೇಳಲು ಜ್ಯೋತಿಷಿಗಳ ಮೊರೆ ಹೋಗುವುದು, ಅವರು ಹೇಳುವ ಪೂಜೆ, ಪುನಸ್ಕಾರಗಳನ್ನು ಮಾಡುವುದು ಸಹಜ. ಆದರೆ ಇಲ್ಲೊಂದು ಭಯಾನಕ ಘಟನೆಯಿಂದ ಯುವಕನೊಬ್ಬ ಮದುವೆಯಾಗಿಲ್ಲ ಎನ್ನುವ ಕಾರಣಕ್ಕೆ ಬಾಲಕಿಯೊಬ್ಬಳನ್ನು ಬಲಿ ಕೊಡಲು ಹೋಗಿರುವ ಘಟನೆ ನಡೆದಿದೆ.

ಈ ಭೀಕರ ಘಟನೆ ನಡೆದಿರುವುದು ಉತ್ತರ ಪ್ರದೇಶದ ನೋಯ್ಡಾದಲ್ಲಿ. ಇದೇ ಹೋಳಿಯ ಸಂದರ್ಭದಲ್ಲಿ ಬಾಲಕಿಯನ್ನು ಬಲಿ ಕೊಟ್ಟರೆ ಮದುವೆಯಾಗುವುದಾಗಿ ಮಂತ್ರವಾದಿಯೊಬ್ಬ ಹೇಳಿದ್ದರಿಂದ ಅದನ್ನು ನಂಬಿಕೊಂಡಿದ್ದ ಯುವಕ, ಏಳು ವರ್ಷದ ಬಾಲಕಿಯನ್ನು ಅಪಹರಿಸಿದ್ದ.

ಇಲ್ಲಿನ ಛಿಜರ್ಸಿ ಗ್ರಾಮದಲ್ಲಿ ವಾಸವಾಗಿದ್ದ ಬಾಲಕಿ ನಾಪತ್ತೆಯಾಗಿರುವುದನ್ನು ಕಂಡ ಪಾಲಕರು ಗಾಬರಿಗೊಂಡು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಪೊಲೀಸರು 200ಕ್ಕೂ ಅಧಿಕ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ ಯುವಕ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವುದು ಕಂಡಿದೆ.

ನಂತರ ತನಿಖೆ ಚುರುಕುಗೊಳಿಸಿದ ಪೊಲೀಸರು ಯುವಕ ಸೇರಿದಂತೆ ಇನ್ನೋರ್ವನನ್ನು ಬಂಧಿಸಿದ್ದಾರೆ. ಅವರ ಬಾಯಿ ಬಿಡಿಸಿದಾಗ ಈ ಭಯಾನಕ ಕೃತ್ಯ ಬೆಳಕಿಗೆ ಬಂದಿದೆ.

ಬಂಧಿತರನ್ನು ಸೋನು ಬಾಲ್ಮಿಕಿ ಮತ್ತು ಆತನ ಸಹವರ್ತಿ ನೀತು ಎಂಬುವವರು ಈ ಕೃತ್ಯದಲ್ಲಿ ಭಾಗಿಯಾಗಿದ್ದು. ಬಾಲಕಿಯ ಬಲಿ ಕೊಡುವಂತೆ ಹೇಳಿರುವ ಮಂತ್ರವಾದಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವನ್ನು ಪೊಲೀಸರು ಕಾಪಾಡಿದ್ದು ತನಿಖೆ ಮುಂದುವರೆಸಿದ್ದಾರೆ.