ನ್ಯೂಸ್

ಸೋನಿಯಾರನ್ನು ಭೇಟಿಯಾಗಲಿರುವ ನಿತೀಶ್​, ಲಾಲೂ! ಅಪರೂಪದ ಬೆಳವಣಿಗೆಗೆ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆ

ಪಟ್ನಾ: ಬಿಹಾರದ ಮಹಾ ಘಟಬಂಧನದ ನಾಯಕರಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಬರುವ ಭಾನುವಾರ ಸಂಜೆ ಭೇಟಿ ಮಾಡಲಿದ್ದು, ಈ ಭೇಟಿ ಭಾರಿ ಕುತೂಹಲ ಕೆರಳಿಸಿದೆ.

2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯೇತರ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನ ನಡೆಸಿರುವ ನಿತೀಶ್ ಕುಮಾರ್, ಈ ಮಹಾ ಮೈತ್ರಿಕೂಟದ ಸಾಹಸಕ್ಕೆ ಕಾಂಗ್ರೆಸ್ ಬೆಂಬಲ ಪಡೆಯುವ ಉದ್ದೇಶವೇ ಈ ಭೇಟಿಯ ಉದ್ದೇಶ ಎನ್ನಲಾಗಿದೆ.

ಆರು ವರ್ಷಗಳ ಬಳಿಕ ಅವರ ಮೊದಲ ಭೇಟಿಯಾಗಿದೆ. ಈ ಸಭೆಗೆ ಭಾರತ್​ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಕೂಡ ಹಾಜರಾಗಲಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ನಾಯಕರ ಭೇಟಿ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಸಂದರ್ಭದಲ್ಲಿ ಕೆಲವು ಗಂಭೀರ ವಿಷಯಗಳನ್ನು ಚರ್ಚೆ ಮಾಡುವ ಸಾಧ್ಯತೆಗಳು ಇರುವುದಾಗಿ ತಿಳಿದುಬಂದಿದೆ. ತಮ್ಮ ಮೈತ್ರಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಈ ವೇಳೆ ಚರ್ಚೆಯಾಗುವ ನಿರೀಕ್ಷೆಯಿದೆ.

ಆದರೆ ಕಾಂಗ್ರೆಸ್​ ಮಾತ್ರ ಈ ಸುದ್ದಿಗಳನ್ನು ಅಲ್ಲಗಳೆದಿದೆ. ಈ ಭೇಟಿಯಲ್ಲೇನೂ ವಿಶೇಷತೆ ಇಲ್ಲ ಎಂದಿದೆ. ಸೋನಿಯಾ ಗಾಂಧಿ ಜತೆಗಿನ ಈ ಇಬ್ಬರ ಭೇಟಿ ಕೇವಲ ಸೌಜನ್ಯದ ಭೇಟಿಯಾಗಿರಲಿದೆ ಎಂದಿದೆ.

2015ರಲ್ಲಿ ಬಿಹಾರ ಚುನಾವಣೆಗೂ ಮುನ್ನ ನಡೆದ ಇಫ್ತಾರ್ ಕೂಟದಲ್ಲಿ ನಿತೀಶ್ ಕುಮಾರ್ ಮತ್ತು ಸೋನಿಯಾ ಗಾಂಧಿ ಭೇಟಿಯಾದದ್ದೇ ಕೊನೆ. ಆಗ ಬಿಜೆಪಿಯೇತರ ಪಕ್ಷಗಳ ಜತೆ ಸೇರಿಕೊಂಡು ನಿತೀಶ್ ಕುಮಾರ್ ಮಹಾಘಟಬಂಧನ ರಚಿಸಿದ್ದರು. ಅದಾದ ಬಳಿಕ ಅವರಿಬ್ಬರೂ ಮುಖಾಮುಖಿಯಾಗಿಲ್ಲ. ಈ ತಿಂಗಳ ಆರಂಭದಲ್ಲಿ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದರು. ಆಗ ಸೋನಿಯಾ ಗಾಂಧಿ ವೈದ್ಯಕೀಯ ಚಿಕಿತ್ಸೆಗಾಗಿ ವಿದೇಶದಲ್ಲಿದ್ದರು. ಹೀಗಾಗಿ, ಆಗ ಅವರಿಗೆ ಸೋನಿಯಾ ಗಾಂಧಿಯನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಆರು ವರ್ಷಗಳ ಬಳಿಕ ಭೇಟಿ ನಡೆಯುತ್ತಿದೆ.(ಏಜೆನ್ಸೀಸ್​)