ನ್ಯೂಸ್

20 ರೂಪಾಯಿಗಾಗಿ ನಡೆದೇ ಹೋಯಿತೊಂದು ಮರ್ಡರ್!: 13 ವರ್ಷದ ಮಗ ಕಂಗಾಲು

suchetana

ನವದೆಹಲಿ: ಲಕ್ಷಾಂತರ ರೂಪಾಯಿಗಾಗಿ ಕೊಲೆಯಾಗಿರುವ ವಿಷಯಗಳು ಸಾಕಷ್ಟು ಕೇಳಿರುತ್ತೇವೆ. ಆದರೆ ಕೇವಲ 20 ರೂಪಾಯಿಗೆ ಕೊಲೆಯಾಗಿರುವ ಅಮಾನುಷ ಘಟನೆ ಉತ್ತರ ದೆಹಲಿಯ ಬುರಾರಿ ಬಳಿ ನಡೆದಿದೆ.

13 ವರ್ಷದ ಮಗನ ಎದುರೇ ತಂದೆಯ ಕೊಲೆಯಾಗಿದೆ. ತಂದೆಯನ್ನು ಉಳಿಸಲು ಮಗ ಗೋಳಾಡಿದರೂ ಈ ಕೃತ್ಯ ನಡೆದೇ ಹೋಗಿದೆ. 38 ವರ್ಷದ ರೂಪೇಶ್ ಎಂಬುವವರು ಕೊಲೆಯಾಗಿರುವ ವ್ಯಕ್ತಿ.

ಆಗಿದ್ದೇನೆಂದರೆ, ರೂಪೇಶ್​ ಅವರು ಶೇವಿಂಗ್ ಮಾಡಿಸಿಕೊಳ್ಳಲು ಮನೆಯ ಬಳಿ ಇದ್ದ ಕಟಿಂಗ್ ಶಾಪ್‍ಗೆ ಹೋಗಿದ್ದರು. ಶೇವ್ ಮಾಡಿಸಿದ ಬಳಿಕ ಅಂಗಡಿಯ ಮಾಲಿಕ ಸಂತೋಷ್‍ 50 ರೂಪಾಯಿ ನೀಡುವಂತೆ ಕೇಳಿದ್ದಾನೆ. ಆದರೆ ಅಷ್ಟು ಹಣ ಇಲ್ಲದ ಕಾರಣ ರೂಪೇಶ್​ 30 ರೂಪಾಯಿ ನೀಡಿದ್ದು, ಉಳಿದ 20 ರೂಪಾಯಿ ನಂತರ ನೀಡುವುದಾಗಿ ಹೇಳಿದ್ದಾರೆ.

ಆದರೆ ಸಂತೋಷ್​ ಜಗಳ ತೆಗೆದಿದ್ದಾನೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಟಾಪಟಿಯಾಗಿದೆ. ಅಲ್ಲಿಯೇ ಇದ್ದ ಸಂತೋಷ್​ ಸಹೋದರ ಸರೋಜ್ ಕೂಡ ಜಗಳದ ನಡುವೆ ಎಂಟ್ರಿಯಾಗಿದ್ದಾನೆ.

ಜಗಳ ವಿಕೋಪಕ್ಕೆ ಹೋಗಿ ಸಹೋದರರು ಸಲೂನ್ ಒಳಗಡೆಯೇ ರೂಪೇಶ್‍ನನ್ನು ಪ್ಲಾಸ್ಟಿಕ್ ಪೈಪ್‍ನಿಂದ ಮನಬಂದಂತೆ ಥಳಿಸಿದ್ದಾರೆ. ರೂಪೇಶ್‍ನ 13 ವರ್ಷದ ಮಗ ತನ್ನ ತಂದೆಯನ್ನು ಬಿಡಿಸಿಕೊಳ್ಳಲು ಹರಸಾಹಸ ಪಟ್ಟರೂ ಪ್ರಯೋಜನ ಆಗಲಿಲ್ಲ.

ತೀವ್ರವಾಗಿ ಹಲ್ಲೆಗೊಳಗಾದ ರೂಪೇಶ್​ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು.

ಘಟನೆಯನ್ನು ದಾರಿ ಹೋಕರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಹಾಗೂ ಸರೋಜ್ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.