ನ್ಯೂಸ್

ಮತದಾರರು ಕೈಬಿಟ್ಟರೂ, ಬೆಳಕು ನೀಡಿ ಕೊಟ್ಟ ಮಾತು ಉಳಿಸಿಕೊಂಡ ‘ಮೆಟ್ರೋಮ್ಯಾನ್‌’ ಶ್ರೀಧರನ್‌!

ಪಾಲಕ್ಕಡ್ (ಕೇರಳ): ಮೆಟ್ರೋಮ್ಯಾನ್‌ ಎಂದೇ ಖ್ಯಾತಿ ಗಳಿಸಿರುವ ಇ.ಶ್ರೀಧರನ್‌ (88) ಅವರು ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಕೇರಳದ ವಿಧಾನಸಭಾ ಚುನಾವಣಾ ಕಣಕ್ಕಿಳಿದಿದ್ದರು. ಪಾಲಕ್ಕಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಈ ಕ್ಷೇತ್ರದ ಮತದಾರರು ಇವರ ಕೈಹಿಡಿಯಲಿಲ್ಲ. ಬದಲಿಗೆ ಕಾಂಗ್ರೆಸ್ ಅಭ್ಯರ್ಥಿ ಶಫಿ ಪರಂಬಿಲ್ ಅವರು ಜಯ ಸಾಧಿಸಿದ್ದರು. ಕೇವಲ ನಾಲ್ಕು ಸಾವಿರ ಮತಗಳ ಅಂತರದಿಂದ ಶ್ರೀಧರನ್‌ ಪರಾಭವಗೊಂಡಿದ್ದರು.

ಇ.ಶ್ರೀಧರನ್‌ ಅವರು ಚುನಾವಣಾ ಪ್ರಚಾರಕ್ಕೆ ಹೋದ ಸಮಯದಲ್ಲಿ ನಾನು ಗೆಲಲ್ಲಿ ಅಥವಾ ಸೋಲಲಿ, ಪಾಲಕ್ಕಡ್ ಮುನ್ಸಿಪಾಲಿಟಿಯ ಮದುರವೀರನ್ ಕಾಲೋನಿಯ ಎಲ್ಲಾ ಕುಟುಂಬಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಭರವಸೆ ಕೊಟ್ಟಿದ್ದರು. ಆ ಮಾತನ್ನೀಗ ಅವರು ಉಳಿಸಿಕೊಂಡಿದ್ದಾರೆ.

ಬೆಳಕು ಕಾಣದೇ ವಂಚಿತರಾಗಿದ್ದ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿಕೊಟ್ಟಿದ್ದಾರೆ. ಈ ಪೈಕಿ ಕೆಲವು ಮನೆಗಳ ವಿದ್ಯುತ್ ಶುಲ್ಕ ಬಾಕಿ ಇದುದ್ದರಿಂದ ವಿದ್ಯುತ್ ಸಂಪರ್ಕವನ್ನು ಕಿತ್ತು ಹಾಕಲಾಗಿತ್ತು. ಚುನಾವಣಾ ಪ್ರಚಾರಕ್ಕೆ ಹೋದಾಗಲೇ ಅವರು ಎಲ್ಲರಿಗೂ ಪುನಃ ವಿದ್ಯುತ್‌ ನೀಡುವ ಭರವಸೆ ಕೊಟ್ಟಿದ್ದರು.

ಅದರಂತೆಯೇ, ಈ ಕುಟುಂಬದ ಬಾಕಿ ವಿದ್ಯುತ್ ಬಾಕಿ ಪಾವತಿಗಾಗಿ 81,525 ರೂಪಾಯಿ ಚೆಕ್ಕನ್ನು ವಿದ್ಯುತ್‌ ನಿಗಮಕ್ಕೆ ಶ್ರೀಧರನ್ ಕಳುಹಿಸಿದ್ದಾರೆ. ಅಲ್ಲದೇ, ಪರಿಶಿಷ್ಟ ಜಾತಿಯ 11 ಕುಟುಂಬಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಇಂದು ನಡೆದ ಕಾರ್ಯಕ್ರಮದಲ್ಲಿ ಶ್ರೀಧರನ್‌ ಚೆಕ್ಕನ್ನು ಹಸ್ತಾಂತರಿಸಿದರು.