ಅಹಮದಾಬಾದ್: ತನ್ನ ಅಮ್ಮ ಬದುಕಿರುವಾಗಲೇ ಅಪ್ಪ ಇನ್ನೊಂದು ಮದುವೆಯಾಗಲು ಹೊರಟಿದ್ದನ್ನು ತಡೆದಿದ್ದಕ್ಕೆ ಮಗನನ್ನು ಅಪ್ಪ ಕಚ್ಚಿಕಚ್ಚಿ ಗಾಯಗೊಳಿಸಿರುವ ಘಟನೆ ಅಹಮದಾಬಾದ್ನ ದರಿಯಾಪುರದಲ್ಲಿ ನಡೆದಿದೆ.
ಯಹ್ಯಾ ಶೇಖ್ ಎಂಬಾತನದ ತಂದೆ ನಯೀಮುದ್ದೀನ್ ಶೇಖ್ ಈ ಕೃತ್ಯ ಎಸಗಿದ್ದು, ಇದೀಗ ಅಪ್ಪನ ವಿರುದ್ಧ ಮಗ ದೂರು ದಾಖಲು ಮಾಡಿದ್ದಾನೆ.
ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವ ಯಹ್ಯಾ ಶೇಖ್ ಹಾಗೂ ಈತನ ತಾಯಿ ಒಂದು ಮನೆಯಲ್ಲಿ ನೆಲೆಸಿದ್ದಾರೆ. ಈತನ ಅಪ್ಪ ನಯೀಮುದ್ದೀನ್ ಮೂರು ವರ್ಷಗಳಿಂದ ಕುಟುಂಬದ ಜತೆ ಸಂಪರ್ಕ ಕಳೆದುಕೊಂಡಿದ್ದು, ಅದೇ ಮನೆಯ ನೆಲಮಹಡಿಯಲ್ಲಿ ವಾಸವಿದ್ದಾನೆ. ಅಮ್ಮ-ಮಗ ಮೊದಲ ಮಹಡಿಯಲ್ಲಿ ಇದ್ದಾರೆ.
ನಿನ್ನೆ ಮೊದಲ ಮಹಡಿಗೆ ಹೋದ ನಯೀಮುದ್ದೀನ್ ತಾನು ಇನ್ನೊಂದು ಮದುವೆಯಾಗುವುದಾಗಿ ಹೇಳಿದ್ದಾನೆ. ಇದಕ್ಕೆ ಮಗ ಪ್ರತಿರೋಧ ವ್ಯಕ್ತಪಡಿಸಿದ್ದಾನೆ. ಅಮ್ಮ ಬದುಕಿರುವಾಗ ಈ ರೀತಿ ಇನ್ನೊಂದು ಮದುವೆಯಾಗುವುದು ಸರಿಯಲ್ಲ. ಅಮ್ಮನ ಜತೆಯೇ ಹೊಂದಿಕೊಂಡು ಹೋಗು ಎಂದು ಅಪ್ಪನಿಗೆ ಬುದ್ಧಿಮಾತು ಹೇಳಿದ್ದಾನೆ.
ಇದಕ್ಕೆ ಸಂಬಂಧಿಸಿದಂತೆ ಅಪ್ಪ-ಮಗನ ನಡುವೆ ವಾಗ್ವಿವಾದ ಆಗಿದೆ. ಇದರಿಂದ ಸಿಟ್ಟಿಗೆದ್ದ ನಯೀಮುದ್ದೀನ್, ಕಿವಿ, ಮಗನ ಭುಜ ಮತ್ತು ಕೆನ್ನೆಗೆ ಕಚ್ಚಿದ್ದಾನೆ. ಅಲ್ಲದೆ ಪಕ್ಕದಲ್ಲಿದ್ದ ಪತ್ನಿ ಜುಬೇದಬಾನೋ ಮುಖಕ್ಕೂ ಹೊಡೆದಿದ್ದಾನೆ.
ತಂದೆಯ ವರ್ತನೆಯಿಂದ ಗಾಬರಿಗೊಂಡ ಮಗ ಯಹ್ಯಾ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಅಲ್ಲದೆ ತನ್ನ ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.