ನ್ಯೂಸ್

ತಾಳಿ ಕಟ್ಟಲು ವರ ಮುಂದಾದಾಗ, ಹಣೆಗೆ ಬೇರೊಬ್ಬ ಹಚ್ಚಿದ ಸಿಂಧೂರ! ಆಮೇಲಾದದ್ದು ದುರಂತ

ನಳಂದಾ (ಬಿಹಾರ): ಇನ್ನೇನು ವರ, ವಧುವಿನ ಕುತ್ತಿಗೆಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಸಿನಿಮೀಯ ರೀತಿಯಲ್ಲಿ ಎಂಟ್ರಿ ಕೊಟ್ಟ ವಧುವಿನ ಪ್ರಿಯಕರ, ಆಕೆಯ ಹಣೆಗೆ ಸಿಂಧೂರವಿಟ್ಟು ಅಧಿಕೃತವಾಗಿ ಪತಿಯಾಗಿಬಿಟ್ಟ! ಇಂಥದ್ದೊಂದು ಕುತೂಹಲದ ಘಟನೆ ನಡೆದಿದ್ದು ಬಿಹಾರದ ನಳಂದಾದಲ್ಲಿ.

ಯುವಕ ಮುಖೇಶ್​ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಇದು ಯುವತಿಯ ಮನೆಯವರಿಗೆ ತಿಳಿದುಬಿಟ್ಟಿದೆ. ಹೀಗೆಯೇ ಬಿಟ್ಟರೆ ಮುಂದೆ ಅನಾಹುತ ಆಗುವುದು ಎಂದು ತಿಳಿದ ಅವರು, ಕೂಡಲೇ ಗಂಡೊಬ್ಬನನ್ನು ಗುರುತು ಮಾಡಿ ಮಗಳ ಮದುವೆಯನ್ನು ಫಿಕ್ಸ್​ ಮಾಡಿಬಿಟ್ಟಿದ್ದಾರೆ. ಆದರೆ ಯುವತಿ ಬಿಟ್ಟಾಳೆಯೇ? ಈ ವಿಷಯವನ್ನು ಪ್ರಿಯಕರ ಮುಖೇಶ್​ಗೆ ಹೇಳಿದ್ದಾಳೆ. ಮೊದಲೇ ಏನೇನು ಮಾಡಬೇಕು ಎಂಬ ಬಗ್ಗೆ ಇಬ್ಬರೂ ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ.

ಮೊದಲೇ ಮಾಡಿಕೊಂಡಿರುವ ಪ್ಲ್ಯಾನ್​ನಂತೆ ಇನ್ನೇನು ಕೆಲ ನಿಮಿಷಗಳಲ್ಲಿ ತಾಳಿ ಕಟ್ಟುವ ಸಮಾರಂಭ ನಡೆಯಬೇಕು ಎನ್ನುವಷ್ಟರಲ್ಲಿ ಕಲ್ಯಾಣ ಮಂಟಪಕ್ಕೆ ಪ್ರಿಯಕರ ಬಂದಿದ್ದಾನೆ. ಮಂಟಪ ಏರಿದ ಆತ, ಮದುವೆಗೆ ಇಟ್ಟ ಮುಹೂರ್ತದಲ್ಲಿಯೇ ಯುವತಿ ಹಣೆಗೆ ಸಿಂಧೂರ ಇಟ್ಟಿದ್ದಾನೆ. ನನ್ನ ಹಣೆಗೆ ಸಿಂಧೂರ ಇಡು ಎಂದು ಎಲ್ಲರ ಸಮ್ಮುಖದಲ್ಲಿಯೇ ಯುವತಿ ಹೇಳಿದ್ದಾಳೆ. ಅದರಂತೆ ಆತ ಸಿಂಧೂರ ಇಟ್ಟಿದ್ದಾನೆ.

ಆದರೆ ಇದೇ ವೇಳೆ ಯುವತಿ ಮನೆಯವರು ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಪ್ರಿಯಕರ ಮುಖೇಶ್​ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು, ಮುಖವೆಲ್ಲಾ ಊದುಕೊಂಡಿರುವುದಾಗಿ ಹೇಳಲಾಗಿದೆ. ಸದ್ಯ ಆತನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇಷ್ಟೆಲ್ಲಾ ಘಟನೆ ನಡೆದ ಮೇಲೆ ವರ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾನೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರು ಬಂದಿದ್ದಾರೆ. ತಮ್ಮ ಪ್ರೀತಿಯ ಬಗ್ಗೆ ಯುವತಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾಳೆ.