ಮುಂಬೈ: ನಟಿ ಮಾಧುರಿ ದೀಕ್ಷಿತ್ ಹಾಗೂ ಶ್ರೀರಾಮ್ ನೇನೇ ಅವರ ಮಗ ರಿಯಾನ್ ತನ್ನ ಉದ್ದನೆಯ ಕೂದಲನ್ನು ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡಿದ್ದಾನೆ. ಎರಡು ವರ್ಷಗಳಿಂದ ಪ್ರೀತಿಯಿಂದ ಈ ಕೂದಲನ್ನು ರಿಯಾನ್ ಬೆಳೆಸಿಕೊಂಡಿರುವುದಾಗಿ ಮಾಧುರಿ ಹೇಳಿದ್ದಾರೆ.
ಇದೇ 7ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವಾಗಿತ್ತು. ಅಂದು ರಿಯಾನ್ ತನ್ನ ತಲೆಗೂದಲನ್ನು ದಾನ ಮಾಡಿದ್ದಾನೆ. ಈತ ಕ್ಷೌರ ಮಾಡುತ್ತಿರುವ ವಿಡಿಯೋವನ್ನು ಮಾಧುರಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕ್ಯಾನ್ಸರ್ ಪೀಡಿತರಿಗಾಗಿಯೇ ನೀಡುವ ನಿಟ್ಟಿನಲ್ಲಿ 2 ವರ್ಷಗಳಿಂದ ತಮ್ಮ ಮಗ ತಲೆ ಕೂದಲು ಕತ್ತರಿಸಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
‘ಕ್ಯಾನ್ಸರ್ನಿಂದಾಗಿ ಕೀಮೋ ಥೆರಪಿಗೆ ಒಳಗಾಗಿ ಕೂದಲು ಕಳೆದುಕೊಳ್ಳುತ್ತಿರುವವರ ಬಗ್ಗೆ ರಿಯಾನ್ ಸದಾ ದುಃಖಿಸುತ್ತಿದ್ದ. ಅವರಿಗೆ ಏನಾದರೊಂದು ಸಹಾಯ ಮಾಡಬೇಕು ಎಂದು ಹೇಳುತ್ತಿದ್ದ. ಕೊನೆಗೆ ಕೂದಲಿನ ದಾನದ ಬಗ್ಗೆ ಅವನೇ ಯೋಚಿಸಿ ಎರಡು ವರ್ಷ ಕೂಡಲು ಬಿಟ್ಟಿದ್ದಾನೆ. ಇದರ ಬಗ್ಗೆ ಅವನು ಹೇಳಿದಾಗ ನನಗೇ ಅಚ್ಚರಿಯಾಯಿತು. ನಿಜಕ್ಕೂ ನನ್ನ ಮಗ ಇಷ್ಟೊಂದು ಯೋಚನೆ ಮಾಡುತ್ತಾನೆಯೇ ಎನ್ನಿಸಿತು’ ಎಂದು ಮಾಧುರಿ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ, ಚಲನಚಿತ್ರ ನಿರ್ಮಾಪಕಿ ಫರಾ ಖಾನ್ ಸೇರಿದಂತೆ ಚಿತ್ರರಂಗ ಹಲವು ಗಣ್ಯರು ಹಾಗೂ ನೆಟ್ಟಿಗರು ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಇದು ಇತರರಿಗೂ ಮಾದರಿ ಎಂದಿದ್ದಾರೆ. ಅಂದಹಾಗೆ ಮಾಧುರಿ ಮತ್ತು ಶ್ರೀರಾಮ್ ಅವರಿಗೆ ಇಬ್ಬರು ಗಂಡುಮಕ್ಕಳಿದ್ದು, ಆರಿನ್ (18) ಮೊದಲ ಮಗ ಹಾಗೂ ರಿಯಾನ್ (16) ಎರಡನೆಯವ.