ಅಪ್ಪು ನೆನಪಲ್ಲಿ ಇಂದು 5 ಸಾವಿರ ಸಸ್ಯಾಹಾರ, 20 ಸಾವಿರ ಮಂದಿಗೆ ಮಾಂಸಾಹಾರ ಊಟಕ್ಕೆ ವ್ಯವಸ್ಥೆ: ಅನ್ನಸಂತರ್ಪಣೆ ವಿವರ ಹೀಗಿದೆ...

Puneeth
Published on

ಬೆಂಗಳೂರು: ಕೋಟ್ಯಂತರ ಅಭಿಮಾನಿಗಳನ್ನು ದುಃಖದಲ್ಲಿ ಮುಳುಗಿಸಿ ಅಗಲಿ ಹೋದ ನಟ ಪುನೀತ್‌ ರಾಜ್‌ಕುಮಾರ್‌ ಅವರು ನಿಧನರಾಗಿ ಇಂದು 12ನೇ ದಿನ. ಅವರ ನೆನಪಿಗಾಗಿ ಇಂದು ಅವರ ಕುಟುಂಬದವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಬೆಳಗ್ಗೆ 11.30ರಿಂದ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದ್ದು, ಏಕಕಾಲಕ್ಕೆ 5 ಸಾವಿರ ಜನರು ಕುಳಿತು ಊಟ ಮಾಡುವಂತಹ ವ್ಯವಸ್ಥೆ ಮಾಡಲಾಗಿದೆ. 20 ಸಾವಿರ ಮಂದಿಗೆ ಮಾಂಸಾಹಾರ ಹಾಗೂ 5 ಸಾವಿರ ಮಂದಿಗೆ ಸಸ್ಯಾಹಾರದ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಊಟ ಸ್ವೀಕರಿಸಬಹುದು.

ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಅರಮನೆ ಮೈದಾನದ ಸುತ್ತಮುತ್ತ ಪೊಲೀಸ್​ ಬಂದೋಬಸ್ತ್ ನಿಯೋಜಿಸಲಾಗಿದೆ.

ಅನ್ನಸಂತರ್ಪಣೆ ವಿವರ:

ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಏಕಕಾಲಕ್ಕೆ ಐದು ಸಾವಿರ ಮಂದಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಬಾಣಸಿಗರು ಅಡುಗೆ ಸಿದ್ಧತೆ ಶುರು ಮಾಡಿದ್ದಾರೆ.

ಅನ್ನಸಂತರ್ಪಣೆ ಕಾರ್ಯಕ್ಕಾಗಿ 25 ಸಾವಿರ ಕೆ.ಜಿ ಅಕ್ಕಿ, 750 ಲೀ. ಅಡುಗೆ ಎಣ್ಣೆ, 3 ಸಾವಿರ ಕೆ.ಜಿ. ಚಿಕನ್, 8500 ಕೋಳಿ ಮೊಟ್ಟೆ, 100 ಕಟ್ಟು ಪುದೀನ ಸೊಪ್ಪು, 100 ಕೆ.ಜಿ ಟೊಮ್ಯಾಟೋ, 50 ಕೆ.ಜಿ ಈರುಳ್ಳಿ, 50 ಕೆ.ಜಿ. ಬೆಳ್ಳುಳ್ಳಿ ತರಿಸಲಾಗಿದೆ. 50, 60,70, 80 ಕೆ.ಜಿಯ ದೊಡ್ಡ ಪಾತ್ರೆಗಳಲ್ಲಿ ಗೀರೈಸ್ ತಯಾರಿಸಲು ಸಿದ್ಧತೆ ನಡೆಸಲಾಗಿದೆ. 50 ಕೆ,.ಜಿಯ ಐದಾರು ದೊಡ್ಡ ಪಾತ್ರೆಗಳಲ್ಲಿ ಮೊಟ್ಟೆಗಳನ್ನು ಬೇಯಿಸಲಾಗ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net