ನ್ಯೂಸ್

ಕೇರಳ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್​ ಪತ್ನಿಗೆ ಗಂಡುಮಗು ಜನನ

ಕೋಯಿಕ್ಕೋಡ್‌: ಕಳೆದ ತಿಂಗಳು ಕೇರಳದ ಕೋಯಿಕ್ಕೋಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಭಾರಿ ದುರಂತದಲ್ಲಿ ಮೃತಪಟ್ಟ ಸಹ ಪೈಲಟ್‌ ಅಖಿಲೇಶ್‌ ಕುಮಾರ್‌ ಅವರ ಪತ್ನಿಗೆ ಇಂದು ಗಂಡುಮಗು ಜನಿಸಿದೆ.

ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇರುವುದಾಗಿ ಆಸ್ಪತ್ರೆಯ ಮೂಲಗಳು ಹೇಳಿವೆ.

ಕೊನೆಯ ಹಂತದವರೆಗೂ ಗಂಡನ ಸಾವಿನ ಕುರಿತು ಮನೆಯವರು ತುಂಬು ಗರ್ಭಿಣಿಯಿಂದ ಮುಚ್ಚಿಟ್ಟಿದ್ದರು. ಕೊನೆಗೂ ಅವರಿಗೆ ಸಾವಿನ ಬಗ್ಗೆ ಅರಿವಾಗಿತ್ತು.

ಈ ಸಂದರ್ಭದಲ್ಲಿ ಅವರು ಡಿಪ್ರೆಷನ್​ಗೆ ಹೋಗಿದ್ದರು. ಅವರಿಗೆ ಕೌನ್ಸೆಲಿಂಗ್​ ಮಾಡುವ ಮೂಲಕ ಖಿನ್ನತೆಯಿಂದ ಹೊರಕ್ಕೆ ತರಲು ವೈದ್ಯರ ತಂಡ ಭಾರಿ ಶ್ರಮ ಪಟ್ಟಿದೆ.

ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಕೇರಳ ತಲುಪಿದ ಏರ್​ ಇಂಡಿಯಾ ವಿಮಾನ ಕರೀಪುರದಲ್ಲಿರುವ ಕೋಯಿಕ್ಕೋಡ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕ್ರ್ಯಾಶ್ ಲ್ಯಾಂಡಿಂಗ್ ಆಗಿ 18 ಮಂದಿ ಬಲಿ ಪಡೆದಿರುವರ ಪೈಕಿ ಅಖಿಲೇಶ್‌ ಕೂಡ ಒಬ್ಬರು.

ಉತ್ತರ ಪ್ರದೇಶದ ಮಥುರಾ ಮೂಲದ ಅಖಿಲೇಶ್‌, 2017ರಲ್ಲಿ ಮೇಘಾ ಅವರ ಜತೆ ವಿವಾಹವಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಮಗುವಿನ ಮುಖ ನೋಡುವ ಮೊದಲೇ ವಿಮಾನ ದುರಂತ ಅವರನ್ನು ಬಲಿ ಪಡೆದುಬಿಟ್ಟಿದೆ.

ಕೆಲ ತಿಂಗಳ ಹಿಂದಷ್ಟೇ ಅಖಿಲೇಶ್‌ ಅವರನ್ನು ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಸುತ್ತುವರೆದು ಜೈಜೈಕಾರ ಹಾಕಿದ್ದರು. ಏಕೆಂದರೆ ಕರೊನಾ ವೈರಸ್‌ ಹಿನ್ನೆಲೆಯಲ್ಲಿ, ಲಾಕ್‌ಡೌನ್‌ ನಂತರ ಭಾರತದಿಂದ ಶುರುವಾಗಿದ್ದ ವಂದೇಭಾರತ್‌ ವಿಮಾನವನ್ನು ಮೊದಲು ಇಳಿಸಿದವರು ಇದೇ ಅಖಿಲೇಶ್‌.

ಮೇ 8ರಂದು ಕೇರಳದ ಇದೇ ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ತಲುಪಿಸಿದ್ದ ಪೈಲಟ್‌ಗಳ ತಂಡದಲ್ಲಿ ಅಖಿಲೇಶ್‌ ಕುಮಾರ್‌ ಸಹ ಒಬ್ಬರಾಗಿದ್ದರು.

ಈಗ ತಮ್ಮ ಮಗ ಅಖಿಲೇಶ್​ ವಾಪಸ್​ ಮಗುವಿನ ರೂಪದಲ್ಲಿ ಬಂದಿರುವುದಾಗಿ ಅವರ ಪಾಲಕರು ಹೇಳಿದ್ದಾರೆ.