ನ್ಯೂಸ್

The Kashmir Files: ಉಗ್ರರ ಕಣ್ಣುತಪ್ಪಿಸಿ ಅಕ್ಕಿ ಡ್ರಮ್​ನಲ್ಲಿ ಬಚ್ಚಿಟ್ಟುಕೊಂಡ ನನ್ನ ಅಣ್ಣನನ್ನು ಗುಂಡು ಹಾರಿಸಿ ಕೊಂದೇ ಬಿಟ್ಟರು...

ಜಮ್ಮು: 1990ರ ಮಾರ್ಚ್​ 10. ಕಾಶ್ಮೀರದಲ್ಲಿ ಹೇರಲಾಗಿದ್ದ ಕರ್ಫ್ಯೂ ಸಡಿಲಗೊಂಡಿತ್ತು. ಟೆಲಿಕಾಂ ಇಂಜಿನಿಯರ್ ಆಗಿದ್ದ ನನ್ನ ಅಣ್ಣ ಶಾಹೀದ್ ಬಾಲ್ ಕ್ರಿಶನ್ ಗಂಜು ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ. ಉಗ್ರರು ಹಿಂದೂಗಳನ್ನು ಹಿಂಬಾಲಿಸುತ್ತಿರುವ ಸುದ್ದಿ ನಮಗೆಲ್ಲಾ ಮೊದಲೇ ತಿಳಿದಿತ್ತು. ಆದರೆ ನನ್ನ ಅಣ್ಣನಿಗೆ ಉಗ್ರರು ಹಿಂಬಾಲಿಸುತ್ತಿದ್ದಾರೆ ಎಂದು ತಿಳಿದೇ ಇರಲಿಲ್ಲ.

ಮನೆಗೆ ಆತ ಬರುತ್ತಿದ್ದಂತೆಯೇ, ಅಣ್ಣನ ಪತ್ನಿಗೆ ಅಂದರೆ ನನ್ನ ಅತ್ತಿಗೆಗೆ ಯಾರೋ ಗಂಡನನ್ನು ಹಿಂಬಾಲಿಸಿಕೊಂಡು ಬರುತ್ತಿರುವುದು ಕಂಡಿತು. ಭಯದಿಂದ ಆಕೆ ಗಂಡನಿಗೆ ಕಣ್ಸನ್ನೆ ಮಾಡಿ ಪತಿಯನ್ನು ಮನೆಯೊಳಗೆ ಎಳೆದುಕೊಂಡು ಬಾಗಿಲು ಹಾಕಿಕೊಂಡರು. ವಿಷಯ ತಿಳಿದು ನನ್ನಣ್ಣ ತುಂಬಾ ಭಯಪಟ್ಟ. ಆದರೆ ಅದೃಷ್ಟ ಸರಿಯಿರಲಿಲ್ಲ. ಆತನನ್ನು ಹಿಂಬಾಲಿಸುತ್ತಿದ್ದ ಭಯೋತ್ಪಾದಕರು ಬಾಗಿಲು ಒಡೆದರು, ಮನೆಗೆ ನುಗ್ಗಿದರು.

ಮನೆಯಲ್ಲಿದ್ದ ಅಣ್ಣನ ಮಕ್ಕಳು, ಅತ್ತಿಗೆ ಸೇರಿದಂತೆ ಎಲ್ಲರ ಮೇಲೆ ಗುಂಡು ಹಾರಿಸಿದರು. ಆಗ ನನ್ನಣ್ಣ ಮೂರನೇ ಮಹಡಿಯತ್ತ ಓಡಿದ. ಅಲ್ಲಿಯೇ ಇದ್ದ ಅಕ್ಕಿ ತುಂಬಿದ್ದ ಡ್ರಮ್​ನಲ್ಲಿ ಅವಿತುಕೊಂಡ. ಆದರೆ ಅದು ಭಯೋತ್ಪಾದಕರಿಗೆ ತಿಳಿಯಿತು. ಕೊನೆಗೆ ಅಕ್ಕಿ ಡ್ರಮ್​ನಲ್ಲಿಯೇ ನನ್ನ ಅಣ್ಣನನ್ನು ಕೊಂದೇ ಬಿಟ್ಟರು...

ಕಾಶ್ಮೀರದ ಛೋಟಾ ಬಜಾರ್​ನಲ್ಲಿ ವಾಸವಿದ್ದ ಪಂಡಿತ್​ ಮನೆತನದ ಶಾಹೀದ್ ಬಾಲ್ ಕ್ರಿಶನ್ ಗಂಜುನ ಕುಟುಂಬ ಬರ್ಬರವಾಗಿ ಹತ್ಯೆಯಾಗಿದ್ದನ್ನು ಹೇಳಿಕೊಂಡವರು ಅವರ ಸಹೋದರಿ ಶಿಬನ್ ಗುಂಜಿ.

ದಿ ಕಾಶ್ಮೀರ್​ ಫೈಲ್ಸ್​ ಚಿತ್ರದಲ್ಲಿಯೂ ಈ ಹತ್ಯೆಯ ಸನ್ನಿವೇಶ ಬರುತ್ತದೆ. ‘ಕಾಶ್ಮೀರಿ ಪಂಡಿತ್ ನೆಟ್ ವರ್ಕ್’ ಎಂಬ ಜಾಲತಾಣದಲ್ಲಿ ಪ್ರಕಟವಾದ ಹತ್ಯೆಯಾದ ಕಾಶ್ಮೀರಿ ಪಂಡಿತರ ಪರಿಚಯದಲ್ಲೂ ಗಂಜು ಅವರ ಸಾವಿನ ಘಟನೆಯ ಉಲ್ಲೇಖವಿದೆ. ಈ ಸಿನಿಮಾದ ಬಿಡುಗಡೆಯ ನಂತರ ಶಿಬನ್​ ಅವರು ಈ ಕರಾಳ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ.

ಇಂಥ ಅದೆಷ್ಟೋ ನೋವಿನ ಘಟನೆಗಳು ಅಂದು ನಡೆದಿರುವುದಾಗಿ ಅವರು ಹೇಳಿದ್ದಾರೆ.