ನ್ಯೂಸ್

ನೌಕರಿ ಹುಡುಕುತ್ತಿದ್ದೀರಾ? ಉದ್ಯೋಗಾಂಕ್ಷಿಗಳಿಗೆ ಗೂಗಲ್‌ ನೀಡಿದೆ ಗುಡ್‌ ನ್ಯೂಸ್‌...

suchetana

ನವದೆಹಲಿ: ಕರೊನಾ ವೈರಸ್‌, ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡಿರುವವರು ಲಕ್ಷ ಲಕ್ಷ ಮಂದಿ. ಚಿಕ್ಕಪುಟ್ಟ ನೌಕರಿಯಿಂದ ಹಿಡಿದು ದೊಡ್ಡ ದೊಡ್ಡ ಸಂಬಳ ಪಡೆಯುವ ನೌಕರಿಯವರೆಗೂ ಉದ್ಯೋಗ ಕಳೆದುಕೊಂಡು ಮನೆ ಸೇರಿರುವವರೇ ಅಧಿಕ ಮಂದಿ.

ನೌಕರಿ ಹುಡುಕುವವರಿಗಾಗಿ ಈಗಾಗಲೇ ಕೆಲವೊಂದು ವೆಬ್‌ಸೈಟ್‌ಗಳು ಲಭ್ಯ ಇರುವುದು ಹೊಸ ವಿಷಯವಲ್ಲ. ಈ ವೆಬ್‌ಸೈಟ್‌ ಮೂಲಕ ನೌಕರಿ ಕಂಡುಕೊಂಡವರೂ ಇದ್ದಾರೆ.

ಆದರೆ ಅವೆಲ್ಲವುಗಿಂತಲೂ ಒಂದು ಪಟ್ಟು ಹೆಚ್ಚಿಗೆ ಅನುಕೂಲವಾಗಿರುವಂಥ ಆ್ಯಪ್‌ ಒಂದನ್ನು ತಾನು ಕಂಡುಹಿಡಿದಿರುವುದಾಗಿ ವಿಶ್ವದ ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿ ಗೂಗಲ್‌ ಹೇಳಿದೆ. ಮೊಬೈಲ್ ಫೋನ್ ಮೂಲಕವೇ ನೌಕರಿಯನ್ನು ಪಡೆದುಕೊಳ್ಳುವಂತೆ ತಾನು ಮಾಡಲಿರುವುದಾಗಿ ಅದು ಹೇಳಿದೆ.

ಅದೇನೆಂದರೆ ನೌಕರಿ ಕಂಡುಹಿಡಿಯುವವರಿಗಾಗಿಯೇ ಗೂಗಲ್‌ ಹೊಸದೊಂದು ಅಪ್ಲಿಕೇಷನ್‌ (ಆ್ಯ‍ಪ್‌) ಶುರು ಮಾಡಿದೆ. ಈ ಆ್ಯಪ್‌ ಹೆಸರು ಕ್ರೋಮೋ ಜಾಬ್ಸ್‌ (Kormo Jobs).

ಗೂಗಲ್ ಈ ಆ್ಯಪನ್ನು ಕಳೆದ ವರ್ಷವೇ ಆರಂಭಿಸಿದೆ. ಆಗ ಇದರ ಹೆಸರು 'ಸ್ಪಾಟ್' ಎಂದಿತ್ತು. ಇದೀಗ ಅದನ್ನು ರೀಬ್ರಾಂಡ್ ಮಾಡಿ ಹೊಸ ಹೆಸರು ಮತ್ತು ವೈಶಿಷ್ಟ್ಯದೊಂದಿಗೆ ಬಿಡುಗಡೆ ಮಾಡಿದೆ ಗೂಗಲ್‌ ಕಂಪೆನಿ.

ಏನಿದರ ವಿಶೇಷತೆ:

ಗೂಗಲ್‌ ಕಂಪೆನಿ ಹೇಳುವಂತೆ, ’ಉದ್ಯೋಗದ ಹುಡುಕಾಟದಲ್ಲಿರುವ ಹೆಚ್ಚಿನ ಸಂಖ್ಯೆಯ ಜನರು ಹಾಗೂ ಉದ್ಯೋಗಿಗಳ ಹುಡುಕಾಟದಲ್ಲಿರುವ ವಿವಿಧ ಕಂಪೆನಿಗಳು ಈ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸಕ್ರೀಯರಾಗಿದ್ದಾರೆ. ಕರೊನಾ ವೈರಸ್‌ನ ಈ ದಿನಗಳಲ್ಲಿ ಉದ್ಯೋಗ ಕಳೆದುಕೊಂಡಿರುವವರು ಉದ್ಯೋಗಗಳನ್ನು ಹುಡುಕುತ್ತಿರುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಅದನ್ನೇ ಗಮನದಲ್ಲಿ ಇಟ್ಟುಕೊಂಡು ಹೊಸ ಹೊಸ ಬದಲಾವಣೆಗಳನ್ನು ಈ ಆ್ಯಪ್‌ನಲ್ಲಿ ತರಲಾಗಿದೆ. ಕಂಪೆನಿಯು ರಿಮೋಟ್ ಇಂಟರ್ವ್ಯೂ ಗಳಂತಹ ವೈಶಿಷ್ಟ್ಯಗಳನ್ನು ಇದರಲ್ಲಿ ಸೇರಿಸಿದೆ. ಜನರು ತಮ್ಮ ಮನೆಯಲ್ಲಿಯೇ ಕುಳಿತು ಸಂದರ್ಶನಗಳನ್ನು ನೀಡಲು ಇದು ಸಹಾಯ ಮಾಡಲಿದೆ’ ಎಂದಿದೆ.

ಗೂಗಲ್ ಪ್ರಕಾರ, ಜೊಮ್ಯಾಟೊ, ಡುಂಜೊಗಳಂತಹ ದೊಡ್ಡ ಕಂಪನಿಗಳು ಕೂಡ ಈ ಆ್ಯಪ್ ಮೂಲಕ ಹೊಸ ಅಭ್ಯರ್ಥಿಗಳನ್ನು ಹುಡುಕುತ್ತಿವೆ. ಈ ವೇದಿಕೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಪರಿಶೀಲಿಸಿದ ಉದ್ಯೋಗಗಳನ್ನು ಪೋಸ್ಟ್ ಮಾಡಲಾಗಿದೆ, ಈ ಆ್ಯಪ್‌ ಪ್ರಸ್ತುತ ಭಾರತದಲ್ಲಿ ಅಸ್ತಿತ್ವದಲ್ಲಿರುವ ಅತಿದೊಡ್ಡ ವೃತ್ತಿಪರ ಜಾಬ್ ನೆಟ್‌ವರ್ಕಿಂಗ್ ತಾಣ ಲಿಂಕ್ಡ್‌ಇನ್‌ ಗೆ ತೀವ್ರ ಪೈಪೋಟಿ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ ಎಂದಿದೆ.

ಈ ಆ್ಯಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ತಮ್ಮಲ್ಲಿರುವ ಕೌಶಲಗಳ ಬಗ್ಗೆ ಮಾಹಿತಿಯನ್ನು ನೀಡಿ, ಸರ್ಚ್ ಬಟನ್‌ ಕ್ಲಿಕ್ಕಿಸಬೇಕು. ತಕ್ಷಣ ಉದ್ಯೋಗಿಗಳ ಹುಡುಕಾಟದಲ್ಲಿ ನಿರತವಾಗಿರುವ ಹಲವು ಕಂಪೆನಿಗಳ ಪಟ್ಟಿ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ ಎಂದು ಗೂಗಲ್‌ ಹೇಳಿದೆ.