ನ್ಯೂಸ್

'ಜೇಮ್ಸ್'​ ಸಂಭ್ರಮಕ್ಕೆ ಅಡ್ಡಿಯಾದ ಹಿಜಾಬ್​: ಕಾರ್ಯಕ್ರಮ ಕ್ಯಾನ್ಸಲ್​- ಅಪ್ಪು ಅಭಿಮಾನಿಗಳ ಕಣ್ಣೀರು

suchetana

ಬೆಂಗಳೂರು: ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಕೋಟ್ಯಂತರ ಅಭಿಮಾನಿಗಳು ಕಾದು ಕುಳಿತಿರುವ ದಿನ ಕೊನೆಗೂ ಬಂದಿದೆ. ಮಾರ್ಚ್​ 17ರ ಹುಟ್ಟುಹಬ್ಬದಂದು ಪುನೀತ್​ ಅವರ ಬಹು ನಿರೀಕ್ಷಿತ ಜೇಮ್ಸ್​ ಚಿತ್ರದ ಷೋ ನಡೆಯಲಿದ್ದು, ಇದಕ್ಕಾಗಿ ಅಪ್ಪು ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

ಆದರೆ ಇದರ ನಡುವೆಯೇ, ಪುನೀತ್​ ಅಭಿಮಾನಿಗಳಿಗೆ ಭಾರಿ ನಿರಾಸೆಯೆನ್ನುವ ಸುದ್ದಿಯೊಂದು ಹೊರಬಂದಿದೆ. ಅದೇನೆಂದರೆ ಹಿಜಾಬ್​ ಕುರಿತು ಹೈಕೋರ್ಟ್​ ತೀರ್ಪಿನ ನಂತರವೂ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಕೆಲವು ಮುಸ್ಲಿಂ ಮುಖಂಡರು ಶಾಲಾ-ಕಾಲೇಜುಗಳಲ್ಲಿ ಗಲಾಟೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 144 ಸೆಕ್ಷನ್​ ಜಾರಿಯಲ್ಲಿದೆ. ಇದರಿಂದಾಗಿ ಪುನೀತ್​ ಅಭಿಮಾನಿಗಳ ಸಂಭ್ರಮಾಚರಣೆಗೆ ತಣ್ಣೀರು ಎರೆಚಲಾಗಿದೆ.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್​ ಚಿತ್ರಮಂದಿರದಲ್ಲಿ ಪುನೀತ್​ ಅವರು 31 ಕಟ್​ ಔಟ್​ಗಳನ್ನು ನಿಲ್ಲಿಸಲಾಗಿದ್ದು, ಅವುಗಳ ಮೇಲೆ ಹೆಲಿಕಾಪ್ಟರ್​ನಿಂದ ಪುಷ್ಪಾರ್ಚನೆ ಮಾಡಲು ಅಭಿಮಾನಿಗಳು ಕಾತರರಾಗಿದ್ದರು. ಇದಕ್ಕೆ ಸಕಲ ಸಿದ್ಧತೆಗಳೂ ನಡೆದಿದ್ದವು. ಆದರೆ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಕ್ರಮಕ್ಕೆ ಅನುಮತಿಯನ್ನು ನೀಡಲಿಲ್ಲ. ಇದರ ಜತೆಗೆ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಕೆಲವೆಡೆ ಸಂಭ್ರಮಾಚರಣೆಗೂ ಪೊಲೀಸರು ಅನುಮತಿ ಕೊಡಲಿಲ್ಲ ಎಂದು ತಿಳಿದುಬಂದಿದೆ.

ಇದಿಷ್ಟೇ ಅಲ್ಲದೇ, ಬೆಳಗಿನ 5 ಗಂಟೆಗೆ ಪುನೀತ್​ ಅವರ ನೆನಪಲ್ಲಿ ಅಭಿಮಾನಿಗಳು ಬಿರಿಯಾನಿ ಊಟ ಹಮ್ಮಿಕೊಂಡಿದ್ದರು. ಇದನ್ನು ಮಧ್ಯಾಹ್ನಕ್ಕೆ ಶಿಫ್ಟ್​ ಮಾಡಲಾಗಿದೆ.