ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ದಿನಗಳಿಂದ ತಲ್ಲಣ ಸೃಷ್ಟಿಸಿದ್ದು ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಲೋಹಿಯಾ ಅವರ ಬರ್ಬರ ಹತ್ಯೆ. ಜಮ್ಮುವಿನ ಉದಯವಾಲಾ ಪ್ರದೇಶದ ಅವರ ಮನೆಯಲ್ಲೇ ಕತ್ತು ಸೀಳಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿ ದೇಹವನ್ನು ಅರ್ಧಂಬರ್ಧ ಸುಡಲಾಗಿತ್ತು.
ಲೋಹಿಯಾ ಅವರು ತಮ್ಮ ಕಾಲಿಗೆ ಎಣ್ಣೆಯನ್ನು ಹಚ್ಚುತ್ತಿದ್ದರು. ನಂತರ ಒಡೆದ ಬಾಟಲ್‌ನಿಂದ ಅವರ ಕತ್ತನ್ನು ಸೀಳಿ ಹತ್ಯೆ ಮಾಡಲಾಗಿತ್ತು. ಕೊಲೆ ಬಳಿಕ ಆರೋಪಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈ ಹತ್ಯೆಯ ವಿಷಯ ಬಹಿರಂಗಗೊಳ್ಳುತ್ತಲೇ ಟಿಆರ್ಎಫ್ ಉಗ್ರ ಸಂಘಟನೆ ಈ ಕೊಲೆಯ ಹೊಣೆಯನ್ನು ಹೊತ್ತುಕೊಂಡಿತ್ತು. ಈ ಕೊಲೆಯನ್ನು ಹೇಮಂತ್ ಲೋಹಿಯಾ ಅವರ ಮನೆ ಕೆಲಸದ ಯಾಸಿರ್ ಅಹ್ಮದ್ ಎಂಬಾತ ಮಾಡಿರುವುದಾಗಿ ಪೊಲೀಸರು ಅಂದಾಜಿಸಿದ್ದರು. ಅದರಂತೆ ಟಿಆರ್ಎಫ್ ಉಗ್ರ ಸಂಘಟನೆ ಕೊಲೆಯ ಹೊಣೆ ಹೊತ್ತುಕೊಂಡು, 'ಜಮ್ಮು ಕಾಶ್ಮೀರದ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಷಾ ಅವರಿಗೆ ಬಿಸಿ ಮುಟ್ಟಿಸಲು ಹಿರಿಯ ಐಪಿಎಸ್ ಅಧಿಕಾರಿಯನ್ನು ಕೊಲೆ ಮಾಡಿದ್ದೇವೆ. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯಾಸಿರ್ ನಮ್ಮದೇ ಸಂಘಟನೆಗೆ ಸೇರಿದವ' ಎಂದಿದ್ದರು.
ಆದರೆ ಇದೀಗ ಈ ಕೊಲೆ ಪ್ರಕರಣ ವಿಚಿತ್ರ ತಿರುವನ್ನು ಪಡೆದುಕೊಂಡಿದೆ. ಕೊಲೆಯ ನಂತರ ಯಾಸಿರ್ ಪರಾರಿಯಾಗಿದ್ದ. ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಆತ ಬರೆದಿರುವ ಡೈರಿಯೊಂದು ಪೊಲೀಸರ ಕೈ ಸೇರಿದೆ. ಈ ಡೈರಿಯನ್ನು ಓದಿದ ನಂತರ ಯಾಸಿರ್ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಎಂಬುದು ಪೊಲೀಸರಿಗೆ ತಿಳಿದುಬಂದಿತ್ತು. ವಿಚಾರಣೆಯಿಂದ ತಿಳಿದುಬಂದಿದೆ.
ಯಾಸಿರ್ ಸುಮಾರು ಆರು ತಿಂಗಳಿನಿಂದ ಲೋಹಿಯಾ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಆತನ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿ ಆತ, 'ಪ್ರೀತಿಯ ಸಾವೇ.. ನನ್ನ ಜೀವನದಲ್ಲಿ ಬಾ'... 'ಕ್ಷಮಿಸಿ, ನಾನು ಕೆಟ್ಟ ದಿನ, ವಾರ, ತಿಂಗಳು, ವರ್ಷ, ಜೀವನವನ್ನು ಹೊಂದಿದ್ದೇನ' ಎಂದು ಡೈರಿಯಲ್ಲಿ ಬರೆದಿರುವುದು ಪೊಲೀಸರಿಗೆ ಸಿಕ್ಕಿದೆ. 'ನನ್ನ ಜೀವನವನ್ನು ದ್ವೇಷಿಸುತ್ತೇನೆ. ಜೀವನವು ಕೇವಲ ದುಃಖ ಎಂದು ಬರೆಯಲಾಗಿದೆ. ಅಲ್ಲದೇ ಫೋನ್ ಬ್ಯಾಟರಿಯ ರೇಖಾಚಿತ್ರವನ್ನು ಬಿಡಿಸಿ ಅದರಲ್ಲಿ, ಪ್ರೀತಿ 0%, ಉದ್ವೇಗ 90%, ದುಃಖ 99% , ಹುಸಿನಗು 100%' ಎಂದು ಬರೆಯಲಾಗಿದೆ.
1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ 57 ವರ್ಷದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಲೋಹಿಯಾ ಅಸ್ಸಾಂ ಮೂಲದವರಾಗಿದ್ದರು. ಅವರನ್ನು ಆಗಸ್ಟ್‌ನಲ್ಲಿ ಡಿಜಿಪಿ ಕಾರಾಗೃಹಕ್ಕೆ ನಿಯೋಜಿಸಲಾಗಿತ್ತು.(ಏಜೆನ್ಸೀಸ್)