ನ್ಯೂಸ್

ಶೂಟಿಂಗ್​ಗೆ ಹೋದ ಖ್ಯಾತ ಗಾಯಕಿ ಸಂಗೀತಾ ಕೊಲೆ: 12 ದಿನಗಳ ಬಳಿಕ ಅರ್ಧ ಬೆಂದ ಮೃತದೇಹ ಪತ್ತೆ!

ನವದೆಹಲಿ: ದೆಹಲಿಯ ನಿವಾಸಿ ಪ್ರಸಿದ್ಧ ಗಾಯಕಿ ಸಂಗೀತಾ ಅವರು ನಿಗೂಢವಾಗಿ ಮೃತಪಟ್ಟಿದ್ದು, ಅವರ ವಿರೂಪಗೊಂಡ ಮೃತದೇಹ 12 ದಿನಗಳ ಬಳಿಕ ಪತ್ತೆಯಾಗಿದೆ.. ಶೂಟಿಂಗ್ ನೆಪದಲ್ಲಿ ಗಾಯಕಿಯನ್ನ ಕರೆದೊಯ್ಯಲಾಗಿತ್ತು. ನಂತರ ಅವರು ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ.

ಹರಿಯಾಣ್ವಿ ಭಾಷೆಯ ಗಾಯಕಿಯಾಗಿದ್ದ ಸಂಗೀತಾ ಅವರ ಶವ ರೋಹ್ಟಕ್ ಜಿಲ್ಲೆಯ ಹೆದ್ದಾರಿಯೊಂದರ ಬಳಿ ಹೂತಿಟ್ಟ ಸ್ಥಿತಿಯಲ್ಲಿ ಅರ್ಧ ಬೆಂದಿರುವ ರೀತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹರಿಯಾಣ ಮೂಲದ ಸಂಗೀತಾ ಅವರು ದೆಹಲಿಯಲ್ಲಿ ವಾಸಿಸುತ್ತಿದ್ದರು. ಕಳೆದ ಮೇ 11 ರಂದು ಅವರು ಕುಟುಂಬದವರ ಜತೆ ಇದ್ದರು. ಅದೇ ಕೊನೆ. ಮ್ಯೂಸಿಕ್ ವಿಡಿಯೋ ಚಿತ್ರೀಕರಣಕ್ಕೆಂದು ಅವರು ತೆರಳಿದ್ದರು. ಅಂದಿನಿಂದ ಅವರು ವಾಪಸ್ ಆಗಿರಲಿಲ್ಲ. ಕೊನೆಗೆ ಎಲ್ಲೆಡೆ ಹುಡುಕಾಟ ನಡೆಸಿದ್ದ ಪಾಲಕರು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು.

ಸಂಗೀತಾರನ್ನು ಕರೆದುಕೊಂಡು ಹೋಗಿದ್ದ, ಅವರ ಜತೆಯಲ್ಲಿಯೇ ಕೆಲಸ ಮಾಡುತ್ತಿದ್ದ ರವಿ ಮತ್ತು ರೋಹಿತ್​ ಅವರ ಮೇಲೆ ಪಾಲಕರು ಅನುಮಾನ ಪಟ್ಟಿದ್ದು, ಅವರ ವಿರುದ್ಧ ಕೇಸ್ ದಾಖಲು ಮಾಡಲಾಗಿತ್ತು. ಇದರ ಬೆನ್ನತ್ತಿ ಹೋಗಿದ್ದ ಪೊಲೀಸರಿಗೆ ಸಿಸಿಟಿವಿಯೊಂದರಲ್ಲಿ ಸಂಗೀತಾ ಮತ್ತು ರೋಹಿತ್ ಊಟ ಮಾಡಿರುವ ದೃಶ್ಯ ಕಂಡುಬಂದಿತ್ತು. ಆದ್ದರಿಂದ ಇಬ್ಬರನ್ನೂ ವಶಕ್ಕೆ ಪಡೆಯಲಾಗಿತ್ತು. ಇದೀಗ ತಾವೇ ಕೊಲೆ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕೆ ಕಾರಣವೇನು ಎನ್ನುವುದು ಇನ್ನಷ್ಟೇ ತನಿಖೆಯಿಂದ ಬೆಳಕಿಗೆ ಬರಬೇಕಿದೆ.