ನ್ಯೂಸ್

ಡ್ರಗ್ಸ್​ ಕೇಸ್​: ಮಾಜಿ ಗೃಹ ಸಚಿವ ಬಾಲಕೃಷ್ಣನ್​ ಪುತ್ರ ಅರೆಸ್ಟ್​

ತಿರುವನಂತಪುರ: ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಗೃಹ ಸಚಿವ, ಸಿಪಿಐ(ಎಂ) ನಾಯಕ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಬಂಧಿಸಿದ್ದಾರೆ.

ಡ್ರಗ್ಸ್ ಪೆಡ್ಲರ್ ಅನೂಪ್​ಗೆ ಹಣಕಾಸಿನ ನೆರವು ನೀಡಿ, ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಬಿನೀಶ್​ ಮೇಲಿದೆ.

ಕಳೆದ ಸೆಪ್ಟೆಂಬರ್​ ತಿಂಗಳಿನಲ್ಲಿ ತನಿಖಾಧಿಕಾರಿಗಳು ಬಿನೀಶ್​ನ ವಿಚಾರಣೆ ನಡೆಸಿದ್ದರು. ಆಗ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸಹ ಬಿನೀಶ್ ಜತೆ ಡ್ರಗ್ಸ್ ಜಾಲದ ಸಂಪರ್ಕ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿತ್ತು. ಮಾತ್ರವಲ್ಲದೇ ಡ್ರಗ್ಸ್ ವಶಕ್ಕೆ ಪಡೆದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಹಲವಾರು ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪವೂ ಕೇಳಿಬಂದಿತ್ತು. ಅದರಲ್ಲಿ ಪ್ರಮುಖವಾಗಿ ಆರೋಪಿಗಳಾದ ರವೀಂದ್ರನ್ ಮತ್ತು ಅನಿಖಾ ಡಿ. ಅನೂಪ್ ಬಿನೀಶ್ ಅವರ ಆಪ್ತಸ್ನೇಹಿತರಾಗಿದ್ದರು ಎಂದು ತಿಳಿದುಬಂದಿತ್ತು.

ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಿನೀಶ್ ಕೊಡಿಯೇರಿಗೆ ಈ ಹಿಂದೆ ನೊಟೀಸ್ ಜಾರಿಗೊಳಿಸಲಾಗಿತ್ತು. ಪ್ರಕರಣ ಸಂಬಂಧ ಈಗಾಗಲೇ ಪರಪ್ಪನ ಅಗ್ರಹಾರ ಜೈಲು ಸೇರಿರುವ ಅನೂಪ್​ ಕೂಡ ಬಿನೀಶ್ ಹಣ ನೀಡಿದ್ದರ ಕುರಿತು ಬಾಯ್ಬಿಟ್ಟಿದ್ದ.

ಅನೂಪ್ ತನ್ನ ಸ್ನೇಹಿತ ಎಂದು ಬಿನೀಶ್​ ಹೇಳಿದ್ದರು ಅಕ್ರಮ ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದ್ದರು. ಆದರೆ ಹೆಚ್ಚಿನ ತನಿಖೆಗಾಗಿ ಇದೀಗ ಬಂಧಿಸಲಾಗಿದೆ.