ನ್ಯೂಸ್

ಕರೊನಾ ಅಲೆ: ಸರ್ಕಾರಿ ಕಚೇರಿಗಳು ವಾರಕ್ಕೆ ಎರಡು ದಿನ ಬಂದ್​- ಇಲ್ಲಿ ಇನ್ಮುಂದೆ ವಾರಕ್ಕೆ ಐದೇ ದಿನ ಕೆಲಸ

ಭೋಪಾಲ್​: ವಿಶ್ವಾದ್ಯಂತ ಕರೊನಾ ಹಾವಳಿ ಹೆಚ್ಚಾಗಿದೆ. ಕ್ಷಣ ಕ್ಷಣಕ್ಕೂ ಕರೊನಾ ಮೊದಲಿಗಿಂತಲೂ ಹೆಚ್ಚು ಆತಂಕ ಸೃಷ್ಟಿಸುತ್ತಿದೆ. ಇದೇ ಕಾರಣಕ್ಕೆ ಕೆಲವು ರಾಜ್ಯಗಳಲ್ಲಿ ಇದಾಗಲೇ ಲಾಕ್​ಡೌನ್​ ಘೋಷಿಸಿಯಾಗಿದ್ದರೆ, ಕೆಲವು ರಾಜ್ಯಗಳಲ್ಲಿ ರಾತ್ರಿಯ ವೇಳೆ ಕರ್ಫ್ಯೂ ವಿಧಿಸಲಾಗಿದೆ.

ಇದೀಗ ಮಧ್ಯಪ್ರದೇಶದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗುತ್ತಿದೆ.ಇಂದಿನಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಕರ್ಪ್ಯೂ ಜಾರಿಗೆ ಇರಲಿದೆ.

ಇದರ ಜತೆಗೆ, ಇದರ ಸರ್ಕಾರಿ ಕಚೇರಿಗಳನ್ನು ವಾರಕ್ಕೆ ಆರು ದಿನಗಳ ಬದಲು ಐದು ದಿನ ಮಾಡಲಾಗಿದೆ. ಸರ್ಕಾರಿ ಕಚೇರಿಗಳು ಮುಂದಿನ ಮೂರು ತಿಂಗಳವರೆಗೆ ಐದು ದಿನಗಳ ಕಾಲ ಕಾರ್ಯನಿರ್ವಹಿಸಲಿವೆ ಎಂದು ಮಧ್ಯಪ್ರದೇಶ ಸರ್ಕಾರ ಹೇಳಿದೆ.

ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಮುಂದಿನ ಆದೇಶದವರೆಗೆ ಪ್ರತಿ ಭಾನುವಾರ ಎಲ್ಲಾ ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ಲಾಕ್ ಡೌನ್ ಮತ್ತು ಗುರುವಾರ ರಾತ್ರಿ 8 ರಿಂದ ಪ್ರಾರಂಭವಾಗುವ ಮುಂದಿನ ಏಳು ದಿನಗಳ ವರೆಗೆ ಇಡೀ ಚಿಂದ್ವಾರ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವುದಾಗಿ ಅವರು ಹೇಳಿದ್ದಾರೆ. ಸದ್ಯ ಮಧ್ಯಪ್ರದೇಶದಲ್ಲಿ ಮಾತ್ರ ಈ ಯೋಜನೆ ಜಾರಿಗೆ ಬಂದಿದ್ದು, ಬೇರೆ ಬೇರೆ ರಾಜ್ಯಗಳಲ್ಲಿಯೂ ಇದು ಜಾರಿಯಾದರೆ ಅಚ್ಚರಿಯಿಲ್ಲ.