ನ್ಯೂಸ್

ಹೋಟೆಲ್‌ನಲ್ಲಿ ಭೂತ ಕಾಟ: ಬೆಚ್ಚಿಬಿದ್ದ ವಿಶ್ವಖ್ಯಾತಿ ಸಂಶೋಧಕರ ತಂಡ- ಕ್ರಿಕೆಟಿಗರಿಗೂ ಆಗಿತ್ತು ಭಯಾನಕ ಅನುಭವ!

ಬ್ರಿಟನ್‌: 2018ರಲ್ಲಿ ವಾಯವ್ಯ ಲಂಡನ್‌ನಲ್ಲಿರುವ ಪಂಚತಾರಾ ಹೋಟೆಲ್‌ ಶ್ರುಬ್ಬೆರಿಯಲ್ಲಿ ಕ್ರಿಕೆಟಿಗರು ತಂಗಿದ್ದರು. ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯ ವೇಳೆ ಈ ಹೋಟೆಲ್‌ ಅವರಿಗೆ ನೀಡಲಾಗಿತ್ತು. ಆದರೆ ಕೆಲವು ಕೋಣೆಗಳಲ್ಲಿ ಭಾರಿ ವಿಚಿತ್ರ ಅನುಭವ ಆದ ಹಿನ್ನೆಲೆಯಲ್ಲಿ ಕ್ರಿಕೆಟಿಗರು ಬೆಚ್ಚಿಬಿದ್ದು ರಾತ್ರೋರಾತ್ರಿ ರೂಮನ್ನು ಖಾಲಿ ಮಾಡಿದ್ದರು. ಆ ಬಗ್ಗೆ ವಿವರಣೆ ನೀಡಿದ್ದ ಕ್ರಿಕೆಟಿಗರು, ವಿಚಿತ್ರ ಧ್ವನಿ ಕೇಳಿಸಿತು, ಬಾಗಿಲು ತಂತಾನೇ ಹಾಕಿಕೊಂಡಿತು, ಯಾರೋ ನಡೆದಾಡುವ ಶಬ್ದವಾಯಿತು, ಮೆಲ್ಲಗೆ ಬಂದು ಮಾತನಾಡಿದಂತಾಯಿತು ಎಂದೆಲ್ಲಾ ಹೇಳಿಕೊಂಡರು.

ಆಗ ಈ ವಿಷಯ ಭಾರಿ ಸುದ್ದಿಯಾಯಿತು. ಆದರೆ ಹಲವರು ಇದನ್ನು ಹಾಸ್ಯ ಮಾಡತೊಡಗಿದರು. ಕೆಲವೇ ಕೆಲವು ಕ್ರಿಕೆಟಿಗರಿಗೆ ಈ ಅನುಭವ ಆಗಿರುವ ಕಾರಣ ಇದು ಅವರ ಕಲ್ಪನೆಯಷ್ಟೇ. ಆಟದ ಟೆನ್ಷನ್‌ನಲ್ಲಿ ಇರುವ ಕಾರಣ ಈ ರೀತಿಯಾಗಿರಬೇಕು ಎಂದೇ ಬಹುತೇಕರು ಅಂದುಕೊಂಡರು. ಆ ವಿಷಯ ಅಲ್ಲಿಯೇ ತಣ್ಣಗಾಯಿತು.

ಆದರೆ ಆ ಘಟನೆಯ ನಂತರ ಈ ಹೋಟೆಲ್‌ಗೆ ತಂಗಲು ಬರುವವರದ್ದೆಲ್ಲಾ ಇದೇ ದೂರು ಶುರುವಾಯಿತು. ಕೆಲ ದಿನಗಳ ಹಿಂದೆ ಪ್ರಯಾಣಿಕನೊಬ್ಬ ಭಯಾನಕವಾಗಿ ಚೀರುತ್ತಾ ಹೊರಕ್ಕೆ ಬಂದ. ಹೋಟೆಲ್‌ ಸಿಬ್ಬಂದಿ ಬಂದು ಆತನ ಬಳಿ ಕೇಳಿದಾಗ ಎರಡೂ ಕಾಲುಗಳಿಲ್ಲ ಭಯಾನಕ ಆಕೃತಿಯೊಂದು ತನ್ನ ಕೋಣೆಯೊಳಕ್ಕೆ ಬಂತು, ನಾನು ಹೇಗೋ ತಪ್ಪಿಸಿಕೊಂಡು ಬಂದೆ ಎಂದ. ಇದೇ ರೀತಿಯ ವಿಚಿತ್ರ ಅನುಭವಗಳನ್ನು ಅಲ್ಲಿ ತಂಗಿರುವವರೆಲ್ಲಾ ಹೇಳಲು ಶುರು ಮಾಡಿದಾಗ ಈ ಸುದ್ದಿ ಬಹಳ ಗಂಭೀರ ಸ್ವರೂಪ ಪಡೆಯಿತು.

ಅದರಲ್ಲಿಯೂ ಹೋಟೆಲ್‌ನ 333ನೇ ಸಂಖ್ಯೆಯ ಕೋಣೆಯೊಳಕ್ಕೆ ತಂಗಿರುವವರಿಗೇ ಹೆಚ್ಚಾಗಿ ಇಂಥ ತೊಂದರೆಗಳು ಆಗುತ್ತಿರುವುದು ತಿಳಿಯಿತು. ಲೈಟ್‌ ಇದ್ದಕ್ಕಿದ್ದಂತೆಯೇ ಆನ್‌, ಆಫ್‌ ಆಗುವುದರಿಂದ ಆರಂಭವಾಗಿ ವಿಕಾರ ಮುಖಗಳು ಕಾಣಿಸಿಕೊಳ್ಳುತ್ತಿವೆ ಎಂದು ಇಲ್ಲಿ ತಂಗಿರುವವರು ಭಯಾನಕ ಘಟನೆ ವಿವರಿಸಲು ಶುರುಮಾಡಿದರು.

ಇದೀಗ ಇದರ ಸತ್ಯಾಸತ್ಯತೆಯನ್ನು ತಿಳಿಯುವುದಕ್ಕಾಗಿ ಹಲವು ದೇಶಗಳ ಪ್ರಖ್ಯಾತ ಸಂಶೋಧಕರ ತಂಡ ಈ ಹೋಟೆಲ್‌ನಲ್ಲಿ ಅದರಲ್ಲಿಯೂ ಹೆಚ್ಚಾಗಿ 333ನೇ ಕೋಣೆಯ ಸಂಶೋಧನೆಗೆ ತೊಡಗಿಸಿಕೊಂಡಿತು. ತನಿಖೆ ವೇಳೆ ಮೊಟ್ಟ ಮೊದಲ ಬಾರಿಗೆ ಈ ಕೋಣೆಯಲ್ಲಿ ಭಯಾನಕ ಅನುಭವ ಬಿಚ್ಚಿಟ್ಟವರು 1973ರಲ್ಲಿ ಬಿಬಿಸಿ ರೇಡಿಯೋ ಉದ್ಘೋಷಕ ಜೇಮ್ಸ್ ಅಲೆಕ್ಸಾಂಡರ್ ಗಾರ್ಡನ್ ಎನ್ನುವುದು ತಿಳಿಯಿತು. ಅವರು ಪುಸ್ತಕವೊಂದರಲ್ಲಿ ತಮ್ಮ ಅನುಭವ ಹೇಳಿಕೊಂಡಿದ್ದರು. ‘ರಾತ್ರಿ ಒಂದು ಹೊತ್ತಿನಲ್ಲಿ ಎದುರಿಗೆ ಬೆಳಕಿನ ಉಂಡೆಯಂಥ ಚೆಂಡು ಕಾಣಿಸಿಕೊಂಡಿತು, ಆ ಬೆಳಕಿನ ಕಡೆಯಿಂತ ವ್ಯಕ್ತಿಯೊಬ್ಬ ಬಂದ. ಆತನ ಎರಡು ಕಾಲುಗಳು ಕಟ್‌ ಆಗಿದ್ದವು. ತೆವಳುತ್ತಾ ತೆವಳುತ್ತಾ ಹತ್ತಿರ ಬರುತ್ತಿದ್ದಂತೆಯೆ ನಾನು ಅಲ್ಲಿಂದ ಓಡಿಬಂದೆ’ ಎಂದಿದ್ದರು.

ಆದರೂ ಇದರ ಬಗ್ಗೆ ಇನ್ನಷ್ಟು ಸಂಶೋಧನೆ ಅಗತ್ಯವಿದೆ ಎಂದು ಕೆಲ ತಿಂಗಳಿನಿಂದ ಈ ಸಂಶೋಧಕರ ತಂಡ ಸಂಶೋಧನೆ ಮಾಡುತ್ತಿದ್ದು, ಖುದ್ದು ಅವರೇ ಬೆಚ್ಚಿಬೀಳುವಂಥ ಘಟನೆಗಳು ನಡೆದಿವೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಂಶೋಧಕರು, ‘ನಾವು ತನಿಖೆಗಾಗಿ ವೈಜ್ಞಾನಿಕ ಉಪಕರಣಗಳನ್ನು ಬಳಸಿದ್ದೆವು. ಈ ಸಂದರ್ಭದಲ್ಲಿ ಆ ಉಪಕರಣವನ್ನು ತೆಗೆದುಕೊಂಡು ಹೋಟೆಲ್‌ನ ಕೆಲವು ಭಾಗಗಳಿಗೆ ಹೋದಾಗ ನಮ್ಮಂತೆಯೇ ಅಲ್ಲಿ ಯಾರೋ ಮಾತನಾಡುತ್ತಿದ್ದುದು ಕೇಳಿಸಿತು. ನಮ್ಮ ತಂಡದ ಸದಸ್ಯರು ಸುಮ್ಮನಿದ್ದರು. ಆದರೆ ಒಳಗಡೆಯಿಂದ ನಮ್ಮ ಧ್ವನಿಯನ್ನೇ ಅಣಕಿಸುವಂತೆ ಮಾತು ಕೇಳಿಸಿತು. ಒಳಗೆ ಹೋದಾಗ ಯಾರೂ ಇರಲಿಲ್ಲ. ನಾವು ನಮ್ಮ ಬಳಿ ವಾಕಿ-ಟಾಕಿ ಕೊಂಡೊಯ್ದಿದ್ದೆವು. ಆದರೆ ಅದರಿಂದ ವಿಚಿತ್ರ ಧ್ವನಿ ಕೇಳಿಸಲು ಶುರುವಾಯಿತು. ನಾವು ಹೆದರಿ ಅದನ್ನು ಅಲ್ಲಿಯೇ ಬಿಟ್ಟೆವು. ನಂತರ ಅದು ತಾನಾಗಿಯೇ ಚಲಿಸಲು ಶುರುವಾಯಿತು, ವಿಚಿತ್ರ ಧ್ವನಿಗಳು ಕೇಳತೊಡಗಿದವು’ ಎಂದಿದ್ದಾರೆ.

ಸಂಪೂರ್ಣ ಅಧ್ಯಯನದ ನಂತರ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದೆವು. ಧ್ವನಿಯನ್ನು ಆಲಿಸಿದಾಗ ಒಬ್ಬ ಪುರುಷ ಪದೇಪದೇ ವಿಚಿತ್ರವಾಗಿ ಎಲಿಜಬೆತ್‌ ಎಂದು ಹೇಳುತ್ತಿರುವುದು ಕೇಳಿಸಿತು. ನಂತರ ಈ ಬಗ್ಗೆ ವಿಚಾರಿಸಿದಾಗ ಆ ಹೋಟೆಲ್‌ನ ಮಾಲೀಕನ ಮೊದಲ ಪತ್ನಿಯ ಹೆಸರು ಎಲಿಜಬೆತ್‌ ಎನ್ನುವುದು ತಿಳಿಯಿತು. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಕಲೆ ಹಾಕಬೇಕಿದೆ ಎಂದಿದ್ದಾರೆ.

ಅಂದಹಾಗೆ 1844ರಲ್ಲಿ ಊಟಿಯ ಒಂದು ಹೋಟೆಲ್‌ನಲ್ಲಿ ಕೂಡ ಇದೇ ರೀತಿ ಭಯಾನಕ ಅನುಭವವಾಗಿ, ಹೋಟೆಲ್‌ ಅನ್ನು ದೀರ್ಘಕಾಲದವರೆಗೆ ಮುಚ್ಚಲಾಗಿತ್ತು. ‘ರಾಜ್‌’ ಎನ್ನುವ ಹಾರರ್‌ ಫಿಲ್ಮ್‌ ಶೂಟಿಂಗ್‌ ವೇಳೆ ನಿಜವಾಗಿಯೂ ವಿಚಿತ್ರ ಅನುಭವವಾಗಿ ಸಿನಿತಂಡ ಬೆಚ್ಚಿಬಿದ್ದಿತ್ತು. ಇದಾದ ಮೇಲೆ ಚಿತ್ರ-ವಿಚಿತ್ರ ಘಟನೆಗಳು ಇಲ್ಲಿ ಸಂಭವಿಸಲು ಶುರುವಾಗಿದ್ದವು.