ನ್ಯೂಸ್

ಲಂಡನ್‌ ದಾಖಲೆ ಮುರಿದ ಗಾಂಧಿ ಕನ್ನಡಕ ಹರಾಜಾಗಿದ್ದು ಎಷ್ಟು ಬೆಲೆಗೆ ಗೊತ್ತಾ?

suchetana

ಲಂಡನ್: ಗಾಂಧೀಜಿಯವರ ಕನ್ನಡಕ 3,40,000 ಡಾಲರ್‌ಗೆ (ಸುಮಾರು 2.54 ಕೋಟಿ ರೂಪಾಯಿ) ಹರಾಜು ಆಗಿದೆ.

ಈ ಕನ್ನಡಕವರು ಚಿನ್ನ ಲೇಪಿತವಾಗಿದ್ದು, ಲಂಡನ್‌ನಲ್ಲಿ ಹರಾಜು ಆಗಿರುವುದಾಗಿ ಹರಾಜು ಸಂಸ್ಥೆ ತಿಳಿಸಿದೆ.

ಈ ಕುರಿತು ಹರಾಜು ಸಂಸ್ಥೆಯಾಗಿರುವ 'ಈಸ್ಟ್ ಬ್ರಿಸ್ಟಲ್ ಆಕ್ಷನ್ಸ್' ಇನ್‌ಸ್ಟಾಗ್ರಾಮ್‌ನಲ್ಲಿ ಈ ಮಾಹಿತಿಯನ್ನು ನೀಡಿದೆ. .ಅಪೂರ್ವ ವಸ್ತುವೊಂದಕ್ಕೆ ಬಿಡ್‌ನಲ್ಲಿ ಅತ್ಯುತ್ತಮ ಫಲಿತಾಂಶ ದೊರೆತಿದೆ. ಬಿಡ್‌ನಲ್ಲಿ ಭಾಗಿಯಾದವರಿಗೆಲ್ಲ ಧನ್ಯವಾದಗಳು ಎಂದು ಸಂಸ್ಥೆ ಬರೆದಿದೆ.

ಈ ಮೂಲಕ, ಲಂಡನ್‌ನಲ್ಲಿ ಇದುವರೆಗೆ ಹರಾಜು ಆಗಿರುವ ಎಲ್ಲಾ ವಸ್ತುಗಳಿಗಿಂತಲೂ ಇದು ಅತ್ಯಧಿಕ ಬೆಲೆಗೆ ಮಾರಾಟವಾಗಿರುವುದಾಗಿ ದಾಖಲೆ ಪುಟಗಳನ್ನು ಸೇರಿದೆ.

ಗಾಂಧಿಯವರು ಹಳೆಯ ಅಥವಾ ತಮಗೆ ಬೇಡವೆನಿಸಿದ ವಸ್ತುಗಳನ್ನು ಅಗತ್ಯ ಇರುವವರಿಗೆ ಮತ್ತು ಸಹಾಯ ಮಾಡಿದವರಿಗೆ ನೀಡುತ್ತಿದ್ದರು. ಈ ಕನ್ನಡಕವನ್ನು ದಕ್ಷಿಣ ಆಫ್ರಿಕಾದಲ್ಲಿ 1920-30ರ ಅವಧಿಯಲ್ಲಿ ಬ್ರಿಟಿಷ್ ಪೆಟ್ರೋಲಿಯಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಗೆ ನೀಡಿದ್ದರು ಎಂದು ಸಂಸ್ಥೆ ತಿಳಿಸಿದೆ.

ಈ ಕನ್ನಡಕವನ್ನು ಮೊದಲು ಗಾಂಧೀಜಿ ಬಳಸುತ್ತಿದ್ದರು. ನಂತರ ಅದನ್ನು ಅವರು ತಮ್ಮ ಚಿಕ್ಕಪ್ಪನಿಗೆ ನೀಡಿದ್ದರು. ಕಳೆದ 50 ವರ್ಷಗಳಿಂದ ಇದು ಯಾವುದೇ ಉಪಯೋಗವಿಲ್ಲದೇ ಬಿದ್ದುಕೊಂಡಿತ್ತು. ಕಳೆದ ತಿಂಗಳು ಈ ಕನ್ನಡಕ ನಮಗೆ ಸಿಕ್ಕಿದೆ. ಇದು ಪ್ರಯೋಜನ ಇಲ್ಲದೇ ಹೋದರೆ ಅದನ್ನು ಎಸೆಯುವ ಬಗ್ಗೆ ಯೋಚನೆ ಮಾಡಲಾಗಿತ್ತು. ಆದರೆ ಇದು ಗಾಂಧಿಯವರಿಗೆ ಸೇರಿದ್ದು ಎಂದ ಕೂಡಲೇ ಹರಾಜು ಮಾಡಲು ಮುಂದಾಗಿರುವುದಾಗಿ ಈಸ್ಟ್ ಬ್ರಿಸ್ಟಲ್ ಆಕ್ಷನ್ಸ್ ಹೇಳಿದೆ.

ಇದನ್ನು ಪಶ್ಚಿಮ ಲಂಡನ್‌ ವ್ಯಕ್ತಿ ಖರೀದಿ ಮಾಡಿರುವುದಾಗಿ ಸಂಸ್ಥೆ ಹೇಳಿದೆ.