ನ್ಯೂಸ್

ಅಯ್ಯೋ ನೆನಪಾಗ್ತಲೇ ಇಲ್ಲ ಪಾಸ್‌ವರ್ಡ್‌: ಇನ್ನೆರಡು ಸಲ ತಪ್ಪು ಟೈಪಿಸಿದರೆ ಸಾವಿರಾರು ಕೋಟಿ ಗೋವಿಂದ!

suchetana

ಸ್ಯಾನ್‌ಫ್ರಾನ್ಸಿಸ್ಕೊ: ಪಾಸ್‌ವರ್ಡ್‌ ಎನ್ನುವುದು ಇಂದಿನ ಯುಗದ ಬಲುದೊಡ್ಡ ಅಸ್ತ್ರ. ಎಲ್ಲದ್ದಕ್ಕೂ ವಿಭಿನ್ನ ಪಾಸ್‌ವರ್ಡ್‌ ನೀಡಿ ಎಷ್ಟೋ ಬಾರಿ ಕನ್‌ಫ್ಯೂಸ್‌ ಆಗುವುದುಂಟು. ಅದರಲ್ಲಿಯೂ ಸುಲಭದ ಪಾಸ್‌ವರ್ಡ್‌ಗಳನ್ನು ಸುರಕ್ಷತಾ ದೃಷ್ಟಿಯಿಂದ ಯಾವುದೇ ವೆಬ್‌ಸೈಟ್‌ಗಳು ಅಥವಾ ವ್ಯವಹಾರಗಳಿಗೆ ಸಂಬಂಧಿಸಿದ ಆ್ಯಪ್‌ಗಳು ಪಡೆಯುವುದಿಲ್ಲ. ಕ್ಲಿಷ್ಟಕರವಾಗಿರುವ ಪಾಸ್‌ವರ್ಡ್‌ ನೀಡುವಂತೆ ಹೇಳುತ್ತದೆ.

ಹೀಗೆ ಪಾಸ್‌ವರ್ಡ್‌ ತಪ್ಪು ಹೊಡೆದು ಫಜೀತಿಗೆ ಸಿಲುಕಿದವರು ಹಲವರು. ಆದರೆ ಹೇಗೋ ಮಾಡಿ ಅಲ್ಲಿ ಇಲ್ಲಿ ಅಲೆದು, ಅಂತೂ ತಮ್ಮ ಹಣವನ್ನು ಇಲ್ಲವೇ ತಮ್ಮ ಖಾತೆಯನ್ನು ಸೇಫ್‌ ಆಗಿಟ್ಟುಕೊಳ್ಳಬಹುದು. ಆದರೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ಪಾಸ್‌ವರ್ಡ್‌ ಮರೆತದ್ದರಿಂದ ವ್ಯಕ್ತಿಯೊಬ್ಬರು ಇದೀಗ 1,600 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.

ತಿಂಗಳೊಂದರಲ್ಲೇ 92% ಏರಿಕೆ ಕಂಡ ಬಿಟ್‌ಕಾಯಿನ್ ಒಂದೇ ವರ್ಷದಲ್ಲಿ 340%ದಷ್ಟು ದುಬಾರಿಯಾಗುವ ಮೂಲಕ ಭಾರೀ ಸದ್ದು ಮಾಡುತ್ತಿದೆ. ಇದೇ ವೇಳೆ ಬಿಟ್‌ಕಾಯಿನ್ ‌ಅನ್ನೇ ನಂಬಿಕೊಂಡಿರುವ ಹೂಡಿಕೆದಾರರೊಬ್ಬರ ಕಥೆ ಇದಾಗಿದೆ.

ಜರ್ಮನಿ ಮೂಲದ ಸ್ಟೆಫನ್ ಥಾಮಸ್ ಎಂಬಾತ ತನ್ನ ಬಳಿ ಅಪಾರ ಹಣ ಹೊಂದಿದ್ದರೂ ಅದನ್ನ ಖರ್ಚು ಮಾಡಲಾಗಿದ ಪರಿಸ್ಥಿತಿಗೆ ತಲುಪಿದ್ದಾರೆ. ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಸ್ಟೆಫಾನ್ ಥಾಮಸ್ ಹೆಸರಿನ ಜರ್ಮನಿ ಮೂಲದ ಈ ಪ್ರೋಗ್ರಾಮರ್‌ಗೆ, ಐರನ್‌ ಕೀ ಹೆಸರಿನ ಚೊಕ್ಕವಾದ ಹಾರ್ಡ್ ಡ್ರೈವ್‌ ಅಕ್ಸೆಸ್ ಮಾಡಲು ಪಾಸ್ ವರ್ಡ್‌ನ ಅಗತ್ಯವಿದೆ.

$220 ದಶಲಕ್ಷ (1608 ಕೋಟಿ ರೂ.ಗಳು) ಮೌಲ್ಯದ ತಮ್ಮ ಬಿಟ್‌ಕಾಯಿನ್ ಆಸ್ತಿಯ ಪಾಸವರ್ಡ್ ಮರೆತಿದ್ದರಿಂದ ಈ ಫಜೀತಿ ಎದುರಾಗಿದೆ. 10 ಅವಕಾಶಗಳನ್ನು ಇದರಲ್ಲಿ ನೀಡಲಾಗುತ್ತಿದ್ದು, ಇದಾಗಲೇ ಎಂಟು ಬಾರಿ ತಪ್ಪು ಪಾಸ್‌ವರ್ಡ್‌ ಟೈಪಿಸಿದ್ದು, ಇದೀಗ ಎರಡೇ ಅವಕಾಶಗಳು ಇವೆಯಂತೆ. ಇದೇನಾದರೂ ತಪ್ಪಾಗಿ ಟೈಪಿಸಿದರೆ ಬಿಟ್‌ಕಾಯಿನ್‌ ಅಕ್ಸೆಸ್ ಮಾಡುವ ಸಾಧ್ಯತೆಯನ್ನೇ ಕಳೆದುಕೊಳ್ಳಲಿದ್ದಾರಂತೆ.

ಇವರ ಬಳಿ ಬಿಟ್​ ಕಾಯಿನ್​ಗಳ ರೂಪದಲ್ಲಿ 220 ಮಿಲಿಯನ್ ಡಾಲರ್ ಹಣವಿದೆ. ಈ ಬಿಟ್​ ಕಾಯಿನ್​ಗಳನ್ನು ಹಾರ್ಡ್​ಡ್ರೈವ್​ನಲ್ಲಿ ಸೇವ್ ಮಾಡಲಾಗಿದೆ. ಅದನ್ನು ತೆರೆಯಬೇಕಿದ್ದರೆ ಪಾಸ್‌ವರ್ಡ್‌ ಬೇಕಿದೆ. ಅದು ಬಲು ಕಷ್ಟದ ಪಾಸ್‌ವರ್ಡ್‌. ಇದನ್ನು ಬರೆದಿಟ್ಟುಕೊಂಡಿದ್ದ ಪೇಪರ್​ ಕೂಡ ಕಳೆದುಹೋಗಿ ಈ ಸಮಸ್ಯೆ ಎದುರಾಗಿದೆಯಂತೆ .

ಉಳಿದ ಪಾಸ್‌ವರ್ಡ್‌ಗಳಂತೆ ಇದರಲ್ಲಿ ಫಾರ್‌ಗಾಟ್‌ ಪಾಸ್‌ವರ್ಡ್‌ ಎಂದೋ ಇಲ್ಲವೇ ಇನ್ನೇನೋ ಮಾಡಿ ಪಾಸ್‌ವರ್ಡ್‌ ಮರಳಿ ಪಡೆಯುವ ಅವಕಾಶ ಇಲ್ಲ ಎನ್ನಲಾಗಿದೆ. ಬಿಟ್​ ಕಾಯಿನ್ ಬಳಸಿ ರಾತ್ರೋರಾತ್ರಿ ತಮ್ಮ ಹಣವನ್ನ 2-3ಪಟ್ಟು ಹೆಚ್ಚಿಸಿಕೊಂಡವರು ಇದ್ದಾರೆ. ಆದರೆ ಪಾಸ್‌ವರ್ಡ್‌ನ ಸಮಸ್ಯೆಯಿಂದಾಗಿ ಕಳೆದುಕೊಂಡವರೂ ಇದ್ದಾರೆ ಎಂದು ವರದಿಯಾಗಿದೆ.