ರಾಯ್ಪುರ (ಛತ್ತೀಗಢ): ಛತ್ತೀಸಗಢದ ರಾಯ್ಪುರ ಹೆದ್ದಾರಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಜನಜಂಗುಳಿ. ತಾಮುಂದು... ನಾಮುಂದು ಎಂದು ಜನ ಮುಗಿಬಿದ್ದಿದ್ದರು. ಬನ್ನಿ... ಬನ್ನಿ... ಸಿಕ್ಕಷ್ಟು ಮೀನನ್ನು ಬಾಚ್ಕೊಳಿ ಎಂದು ಮತ್ಸ್ಯಪ್ರಿಯರು ಹರ್ಷೋದ್ಗಾರ ಮಾಡುತ್ತಿದ್ದರು.
ಇದಕ್ಕೆ ಕಾರಣ, ಮೀನುಗಳನ್ನ ತುಂಬಿಸಿಕೊಂಡು ಬರುತ್ತಿದ್ದ ಲಾರಿಯೊಂದು ಉರುಳಿ ಬಿದದ್ದು. ಲಾರಿ ಉರುಳಿದ ರಭಸಕ್ಕೆ ಅದರಲ್ಲಿದ್ದ ಮೀನುಗಳೆಲ್ಲ ರಸ್ತೆ ತುಂಬಾ ಬಿದ್ದಿತ್ತು. ನೀರಿನಿಂದ ಹೊರಬಂದು ಚಟಪಡಿಸುತ್ತಿದ್ದ ಈ ತಾಜಾ ಮೀನನ್ನು ಕಂಡು ಜನರು ದೌಡಾಯಿಸಿ ಸಿಕ್ಕಷ್ಟು ಬಾಚಿಕೊಳ್ಳತೊಡಗಿದರು.
ಒಂದು ಗಂಟೆಗೂ ಹೆಚ್ಚು ಕಾಲ ಜನರು ಇಲ್ಲಿ ಬರುತ್ತಿದ್ದ ಕಾರಣ, ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು. ಇಂಥ ಸುದ್ದಿಗಳು ಹರಡಲು ತಡವಾಗುವುದೇ ಇಲ್ಲವಲ್ಲ... ಕ್ಷಣ ಮಾತ್ರದಲ್ಲಿ ಸುತ್ತಮುತ್ತಲಿನ ಜನರ ಕಿವಿಗೆ ಪುಕ್ಕಟೆ ತಾಜಾ ತಾಜಾ ಮೀನು ಸಿಗುತ್ತಿರುವ ಸುದ್ದಿ ತಿಳಿದದ್ದೇ ತಡ ಓಡೋಡಿ ಕೈಗೆ ಸಿಕ್ಕ ಬ್ಯಾಗ್ಗಳನ್ನು, ಪಾತ್ರೆಗಳನ್ನು ಹಿಡಿದುಬಂದು ಮೀನು ತುಂಬಿಸಿಕೊಂಡು ಸಂತೃಪ್ತರಾಗಿ ಹೋದರು.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಬಂದ ಬಳಿಕ ಜನರು ಮೀನು ಬಾಚಿಕೊಳ್ಳುವ ಕೆಲಸ ನಿಲ್ಲಿಸಬೇಕಾಯ್ತು. ಸ್ಥಳೀಯರ ಸಹಾಯದಿಂದ ವಾಹನವನ್ನು ಮೇಲಕ್ಕೆತ್ತಲಾಗಿದ್ದು ಅಳಿದುಳಿದ ಮೀನುಗಳನ್ನು ವಾಪಸ್ ಲಾರಿಗೆ ತುಂಬಿ ರಾಯ್ಪುರಕ್ಕೆ ಕಳುಹಿಸಲಾಯಿತು.