ನ್ಯೂಸ್

ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್​ಗೆ ಎಫ್​ಬಿಐ ಶಾಕ್​: ಮನೆಯ ಮೇಲೆ ಅಧಿಕಾರಿಗಳ ದಾಳಿ

ನ್ಯೂಯಾರ್ಕ್​ (ಅಮೆರಿಕ): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಟ್ರಂಪ್​ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಟ್ರಂಪ್ ತಮ್ಮ ಅಧಿಕಾರದ ಅವಧಿಯಲ್ಲಿ ಅಮೆರಿಕಕ್ಕೆ ಸೇರಿದ ಕೆಲವೊಂದು ಗೌಪ್ಯ ಹಾಗೂ ಮಹತ್ವದ ದಾಖಲೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.

ಈ ಕುರಿತು ಖುದ್ದು ಟ್ರಂಪ್​ ಹೇಳಿಕೊಂಡಿದ್ದು, ತಮ್ಮ ಮಾರ್-ಎ-ಲಾಗೊ ಎಸ್ಟೇಟ್‌ ಮೇಲೆ ದಾಳಿ ನಡೆಸಿರುವ ಎಫ್‌ಬಿಐ ಹುಡುಕಾಟ ನಡೆಸುತ್ತಿದೆ ಎಂದಿದ್ದಾರೆ. ನನ್ನ ಸುಂದರವಾದ ಮನೆಯು ಪ್ರಸ್ತುತ ಮುತ್ತಿಗೆಗೆ ಒಳಗಾಗಿದೆ, ದಾಳಿ ಮಾಡಲಾಗಿದೆ ಮತ್ತು ಎಫ್​ಬಿಐ ಏಜೆಂಟ್‌ಗಳ ದೊಡ್ಡ ಗುಂಪು ಆಕ್ರಮಿಸಿಕೊಂಡಿದೆ ಎಂದು ಅವರು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿದ್ದಾಗ ತಮ್ಮ ಶ್ವೇತಭವನದಿಂದ ಫ್ಲೋರಿಡಾದಲ್ಲಿರುವ ನಿವಾಸಕ್ಕೆ ವರ್ಗೀಕೃತ ಅಧ್ಯಕ್ಷೀಯ ದಾಖಲೆಗಳನ್ನು ತೆಗೆದುಕೊಂಡಿದ್ದಾರೆಯೇ ಎಂಬ ತನಿಖೆಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ದಾಳಿಯ ಸಮಯದಲ್ಲಿ ಡೊನಾಲ್ಡ್​ ಟ್ರಂಪ್ ಎಸ್ಟೇಟ್‌ನಲ್ಲಿ ಇರಲಿಲ್ಲ. ಅವರ ನಿವಾಸದ ಹೊರಗಿನ ವೈಮಾನಿಕ ದೃಶ್ಯಾವಳಿಗಳು ವೈರಲ್ ಆಗಿದ್ದು, ಇದರಲ್ಲಿ ಅವರ ಮನೆಯ ಹೊರಗೆ ಪೊಲೀಸ್ ಕಾರುಗಳು ನಿಂತಿರುವುದನ್ನು ನೋಡಬಹುದು.

ಇನ್ನು ಟ್ರಂಪ್ ನಿವಾಸದ ಮೇಲೆ ಎಫ್‌ಬಿಐ ಅಧಿಕಾರಿಗಳು ದಾಳಿ ನಡೆಸಿರುವುದಕ್ಕೆ ಟ್ರಂಪ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿ ವೇಳೆ ಬೆಂಬಲಿಗರು ಅವರ ಮನೆಯ ಹೊರಗೆ ಜಮಾಯಿಸಿದ್ದರು. ಟ್ರಂಪ್ ಹೆಸರಿನ ಬ್ಯಾನರ್, ಫೋಟೋಗಳನ್ನು ಹಿಡಿದುಕೊಂಡು, ಅಮೆರಿಕನ್ ಧ್ವಜಗಳನ್ನು ಹಿಡಿದು, ಘೋಷಣೆ ಕೂಗಿದರು.

ಇದಾಗಲೇ ಟ್ರಂಪ್ ಅವರ ವಿರುದ್ಧ ಹಲವಾರು ಆರೋಪಗಳು ಇವೆ. ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ರಾಷ್ಟ್ರೀಯ ದಾಖಲೆ ಕಾಣೆ ಮಾಡಿರುವುದು, ಅಮೆರಿಕ ಕ್ಯಾಪಿಟಲ್ ಮೇಲಿನ ದಾಳಿ, ವೈರ್ ವಂಚನೆ, ಜಾರ್ಜಿಯಾ ಚುನಾವಣಾ ಟ್ಯಾಂಪರಿಂಗ್ ಸೇರಿದಂತೆ ಹಲವು ವಿಚಾರಗಳಲ್ಲಿ ಕಾನೂನು ಸಮಸ್ಯೆಯನ್ನು ಅವರು ಎದುರಿಸುತ್ತಿದ್ದಾರೆ. ನ್ಯಾಷನಲ್ ಆರ್ಕೈವ್ಸ್ ಫೆಬ್ರವರಿಯಲ್ಲಿ ಟ್ರಂಪ್ ಅವರ ಫ್ಲೋರಿಡಾ ಎಸ್ಟೇಟ್‌ನಿಂದ 15 ಬಾಕ್ಸ್‌ಗಳಷ್ಟು ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿತ್ತು.

ಸರ್ಕಾರಿ ತನಿಖಾ ಏಜೆನ್ಸಿಗಳೊಂದಿಗೆ ಸಹಕರಿಸಿದ ನಂತರವೂ, ನನ್ನ ಮನೆ ಮೇಲೆ ಈ ಅಘೋಷಿತ ದಾಳಿ ಅಗತ್ಯವಿರಲಿಲ್ಲ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಇದು ಕಾನೂನು ಪಾಲಿಸಬೇಕಾದ ಸಂಸ್ಥೆಯೇ ಮಾಡಿರುವ ದುಷ್ಕೃತ್ಯ. 2024ರಲ್ಲಿ ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಯಸದ ತೀವ್ರಗಾಮಿ ಎಡ ಡೆಮಾಕ್ರಾಟ್‌ಗಳ ದಾಳಿ. ಈ ದಾಳಿ ಗಮನಿಸಿದರೆ ಡೆಮಾಕ್ರಟ್‌ಗಳು ಏನು ಬೇಕಾದರೂ ಮಾಡುತ್ತಾರೆ’ ಎಂದು ಟ್ರಂಪ್ ಕಿಡಿಕಾರಿದ್ದಾರೆ. (ಏಜೆನ್ಸೀಸ್​)