ನ್ಯೂಸ್

ಕೆರೆಯಲ್ಲಿ ಬಿದ್ದ ಐಫೋನ್​ ವರ್ಷದ ಬಳಿಕ ಸಿಕ್ತು- ಚಾಲ್ತಿಯಲ್ಲಿದ್ದ ಮೊಬೈಲ್​ ನೋಡಿ ದಂಗಾದ ಮಾಲೀಕ!

ತೈವಾನ್​: ಅದೃಷ್ಟ ಚೆನ್ನಾಗಿದ್ದರೆ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ಹೆಚ್ಚಿನ ಸ್ಮಾರ್ಟ್​ಫೋನ್​ಗಳು ನೀರಿನಲ್ಲಿ ಬಿದ್ದರೆ ಮುಗೀತು, ಅದು ಹಾಳಾಗುವುದೇ ಹೆಚ್ಚು. ಇನ್ನು ಕೆರೆಯಲ್ಲಿ ಮೊಬೈಲ್​ಫೋನ್​ ಬಿದ್ದರೆ? ಮುಗಿದೇಹೋಯ್ತು ಕಥೆ. ಕೆರೆಯಲ್ಲಿ ಬಿದ್ದರೆ ಮೊಬೈಲ್​ ಹಾಳಾಗುವುದು ದೂರದ ಮಾತು, ಅದು ಸಿಕ್ಕರೇ ಪುಣ್ಯ.

ಆದರೆ ಇಲ್ಲೊಬ್ಬ ತೈವಾನ್​ ವಾಸಿಯ ಅದೃಷ್ಟ ಚೆನ್ನಾಗಿತ್ತು. ಕೆರೆಯಲ್ಲಿ ಬಿದ್ದ ಮೊಬೈಲ್​ ಫೋನ್​ ಸಿಕ್ಕಿದೆ, ಅಷ್ಟೇ ಅಲ್ಲದೇ ಅದು ಚಾಲ್ತಿಯಲ್ಲೂ ಇದೆ. ಅದೂ ಯಾವಾಗ ಅಂತೀರಾ? ಬರೋಬ್ಬರಿ ಒಂದು ವರ್ಷದ ನಂತರ! ಅದು ಚಾಲ್ತಿಯಲ್ಲಿ ಇರುವುದನ್ನು ಕಂಡು ಅದರ ಮಾಲೀಕ ಚೆನ್​ ಖುದ್ದು ದಂಗಾಗಿ ಹೋಗಿದ್ದಾನೆ.

ಅಷ್ಟಕ್ಕೂ ಆಗಿದ್ದೇನೆಂದರೆ ತೈವಾನ್​ನ ಬಹುಭಾಗ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಬರಗಾಲವನ್ನು ಎದುರಿಸುತ್ತಿದೆ. ಕೆಲವು ಕಡೆಗಳಲ್ಲಿ ಮಾತ್ರ ಅಲ್ಪಸ್ವಲ್ಪ ನೀರು ಕಾಣಬಹುದು. ನೀರು ಹೊಂದಿದ್ದ ಕೆರೆಯಲ್ಲಿ ಚೆನ್​ನ ಐಫೋನ್​ ಕಳೆದ ವರ್ಷ ಬಿದ್ದುಹೋಗಿತ್ತು. ಎಷ್ಟು ಹುಡುಕಾಡಿದರೂ ಸಿಕ್ಕಿರಲಿಲ್ಲ. ಅದು ಕೆರೆಯ ತಳಭಾಗಕ್ಕೆ ಹೋಗಿದ್ದರಿಂದ ಅದರ ಆಸೆಯನ್ನು ಚೆನ್​ ಬಿಟ್ಟಿದ್ದ.

ಆದರೆ ಮೊನ್ನೆ ಆತ ಅದೇ ಕೆರೆಯ ಸಮೀಪ ಹೋದಾಗ ಬರಗಾಲದಿಂದ ಕೆರೆ ಸಂಪೂರ್ಣ ಬತ್ತಿರುವುದು ಕಾಣಿಸಿತು. ಆದರೆ ಅಚ್ಚರಿ ಎಂದರೆ ಮೇಲ್ಭಾಗದಲ್ಲಿ ಆತನ ಐಫೋನ್​ ಕಾಣಿಸಿತು. ಅದರ ಕವರ್​ ಎಲ್ಲವನ್ನೂ ನೋಡಿದ ಚೆನ್​ಗೆ ಇದು ತನ್ನದೇ ಫೋನ್​ ಎಂದು ಗೊತ್ತಾಯಿತು.

ಕೆರೆಯಲ್ಲಿನ ಹೂಳಿನಿಂದಾಗಿ ಕೆಸರು ತುಂಬಿಕೊಂಡಿದ್ದ ಮೊಬೈಲ್​ಫೋನ್​ ಅನ್ನುನಿಧಾನವಾಗಿ ಒರೆಸಿ ನೋಡಿದಾಗ ಅದಿನ್ನೂ ಚಾಲ್ತಿಯಲ್ಲಿ ಇದ್ದುದು ಕಂಡು ಚೆನ್​ ಖುಷಿ ತಡೆಯಲಾಗಲಿಲ್ಲ. ಕೂಡಲೇ ಅದರ ಪಾರ್ಟ್​ಗಳನ್ನು ಬೇರ್ಪಡಿಸಿ ನೀರಿನ ಪಸೆಯನ್ನು ಒರೆಸಿ ಫೋನ್​ ಅನ್ನು ಜೋಪಾನ ಮಾಡಿಟ್ಟುಕೊಂಡಿದ್ದಾನೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈತ ಪೋಸ್ಟ್​ ಮಾಡಿದ್ದು, ಇದೀಗ ಭಾರಿ ವೈರಲ್​ ಆಗಿದೆ.