ನ್ಯೂಸ್

ಪ್ರೀತಿಯ ನಾಯಿಗೆ 19 ಅಡಿ ಎತ್ತರದ ಚಿನ್ನದ ಪ್ರತಿಮೆ ಗಿಫ್ಟ್‌!

ತುರ್ಕ್​​ಮೇನಿಸ್ತಾನ್: ಮನುಷ್ಯನ ಅವಿಭಾಜ್ಯ ಅಂಗಗಳಲ್ಲಿ ಒಂದು ನಾಯಿ. ಮನುಷ್ಯ ಬಹುಶಃ ನಾಯಿಯ ಮೇಲೆ ತೋರಿಸುವಷ್ಟು ಪ್ರೀತಿ ಇನ್ನಾವ ಪ್ರಾಣಿಗಳ ಮೇಲೂ ತೋರಿಸಲಾರೇನೋ. ಹಸುಗಳ ಮೇಲೆ ರೈತಾಪಿ ವರ್ಗಕ್ಕೆ ಅತೀವ ಮಮತೆ ಇದ್ದರೆ, ಜಗತ್ತಿನಾದ್ಯಂತ ಉಳಿದ ಪ್ರಾಣಿ ಪ್ರಿಯರು ಪ್ರೀತಿ ತೋರುವುದು ನಾಯಿಗಳ ಮೇಲೆಯೇ.

ಅತ್ಯಂತ ನಿಷ್ಠಾವಂತ ಎಂದೇ ಬಿಂಬಿತಗೊಂಡಿರುವ ನಾಯಿಯೆಂದರೆ ಉನ್ನತ ಹುದ್ದೆಯಲ್ಲಿ ಇರುವವರಿಂದ ಹಿಡಿದು ಅತ್ಯಂತ ಕೆಳಮಟ್ಟದ ವರ್ಗದವರು ಎನಿಸಿಕೊಂಡವವರೆಗೆ, ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಇಷ್ಟವೇ. ಎಷ್ಟೋ ಮನೆಗಳಲ್ಲಲಿ ಇವು ಪ್ರಾಣಿಯ ಬದಲಾಗಿ ಸದಸ್ಯನಂತೆಯೇ ಇವೆ.

ಅಂಥದ್ದೇ ಒಂದು ನಾಯಿಯ ಪ್ರೀತಿಯಲ್ಲಿ ತೇಲಿ ಹೋಗಿರುವವರು ತುರ್ಕ್​​ಮೇನಿಸ್ತಾನ್​​ನ ಅಧ್ಯಕ್ಷ ಗುರ್ಬಂಗಲಿ ಬರ್ಡೀಮುಖಾಮೇಡೊವ‌ ಅವರಿಗೆ ತಮ್ಮ ನಾಯಿಯ ಮೇಲೆ ಅದೆಷ್ಟು ಪ್ರೀತಿ ಎಂದರೆ ತಮ್ಮ ಮುದ್ದು ನಾಯಿಗಾಗಿ ಚಿನ್ನದ ಪ್ರತಿಮೆಯನ್ನೇ ನಿರ್ಮಾಣ ಮಾಡಿಸಿದ್ದಾರೆ ! ಇದು ತಮ್ಮ ಪ್ರೀತಿಯ ನಾಯಿಗಾಗಿ ತಾವು ನೀಡುತ್ತಿರುವ ಗಿಫ್ಟ್‌ ಎಂದು ಅವರು ಹೇಳಿದ್ದಾರೆ!

ತುರ್ಕ್​​​ಮೇನಿಸ್ತಾನದ ರಾಜಧಾನಿ ಅಸ್‌ಘಾಬಾಟ್​​ನಲ್ಲಿ ಅರ್ಕಾಡ್ಯಾಗ್​​​ ಅಥವಾ ರಕ್ಷಕ ಎಂದು ಕರೆಯಲಾಗುವ ನಾಯಿಯ ಚಿನ್ನದ ಪ್ರತಿಮೆಯನ್ನ ನಿರ್ಮಿಸಲಾಗಿದೆ. ಇದನ್ನು ಅವರು ಮೊನ್ನೆ ಅನಾವರಣ ಮಾಡಿದ್ದಾರೆ. ಅಲಾಬೇ ಎಂಬ ಈ ಹೆಸರಿನ ನಾಯಿಯು ಮಧ್ಯ ಏಷ್ಯನ್​​ ಶೆಫರ್ಡ್‌ ತುರ್ಕ್​ಮೇನ್​​ ತಳಿಯಾಗಿದೆ.

ಅಂದಹಾಗೆ ಈ ಚಿನ್ನದ ಪ್ರತಿಮೆ 19 ಅಡಿ ಉದ್ದವಿದೆ. ಇದಕ್ಕೆ ಎಲ್​​ಇಡಿ ಸ್ಕ್ರೀನ್ ಅಳವಡಿಸಲಾಗಿದೆ. ಇದರಲ್ಲಿ ಈ ನಾಯಿ ತಳಿಯ ಕುರಿತಾದ ವಿಡಿಯೋಗಳನ್ನ ಪ್ರಸಾರ ಮಾಡಲಾಗುತ್ತದೆ.