ನ್ಯೂಸ್

ರೇಪ್​ ಆರೋಪ ಮಾಡಿದ ನಾಲ್ಕು ಮಕ್ಕಳ ತಾಯಿಗೆ ಗ್ರಹಚಾರ ಬಿಡಿಸಿದ ಹೈಕೋರ್ಟ್​- ನೀಡಿತು ಇಂಥದ್ದೊಂದು ಶಿಕ್ಷೆ

ನವದೆಹಲಿ: ಹೆಣ್ಣುಮಕ್ಕಳ ಪರವಾಗಿ ಹಲವಾರು ಕಾನೂನುಗಳು ಇದ್ದರೂ, ಅವುಗಳ ದುರ್ಬಳಕೆ ಆಗುತ್ತದೆ ಎಂಬ ಕೂಗು ಹಲವು ವರ್ಷಗಳಿಂದಲೇ ಕೇಳಿಬರುತ್ತಿದೆ. ಅದರಲ್ಲಿಯೂ ಕೌಟುಂಬಿಕ ದೌರ್ಜನ್ಯ, ಅತ್ಯಾಚಾರದಂಥ ಪ್ರಕರಣಗಳಲ್ಲಿ ಇರುವ ಕಾನೂನುಗಳನ್ನು ಹೆಣ್ಣುಮಕ್ಕಳು ದುರುಪಯೋಗ ಪಡಿಸಿಕೊಂಡು ಪುರುಷರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಚಿತ್ರಹಿಂಸೆ ಕೊಡುತ್ತಿರುವ ಹಲವು ಉದಾಹರಣೆಗಳೂ ಇವೆ. ಅಂಥದ್ದೇ ಒಂದು ಪ್ರಕರಣ ಕೋರ್ಟ್​ ಮುಂದೆ ಬಂದಿದ್ದು, ಸುಳ್ಳು ರೇಪ್​ ಆರೋಪ ಮಾಡಿದ ನಾಲ್ಕು ಮಕ್ಕಳ ತಾಯಿಗೆ ಕೋರ್ಟ್​ ಸರಿಯಾಗಿ ಬುದ್ಧಿ ಕಲಿಸಿದೆ.

ಹಣಕಾಸು ವಿವಾದಕ್ಕೆ ಸಂಬಂಧಿಸಿದಂತೆ ಹಿಮಾಂಶು ಎನ್ನುವವರ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಮಹಿಳೆ, ಅವರ ವಿರುದ್ಧ ಅತ್ಯಾಚಾರದ ಕೇಸ್​ ದಾಖಲಿಸಿದ್ದಳು. ಮನೆಗೆ ಕರೆದು ಕೂಲ್​ ಡ್ರಿಂಕ್ಸ್​ನಲ್ಲಿ ನಿದ್ದೆ ಬರುವ ಮಾತ್ರೆಯನ್ನು ಹಾಕಿ ನನ್ನ ಮೇಲೆ ಆತ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರು ದಾಖಲಿಸಿದ್ದಳು. ಇದರ ಅನ್ವಯ ಪೊಲೀಸರು ಹಿಮಾಂಶು ಅವರ ವಿರುದ್ಧ ಎಫ್​ಐಆರ್​ ದಾಖಲು ಮಾಡಿದ್ದರು.

ತಮ್ಮ ಮೇಲೆ ವಿನಾಕಾರಣ ಆರೋಪ ಮಾಡಲಾಗಿದೆ, ತಮ್ಮ ತಪ್ಪು ಏನೂ ಇಲ್ಲ ಎಂದು ಹಿಮಾಂಶು ಅವರು ಎಫ್​ಐಆರ್​ ರದ್ದತಿಗೆ ಕೋರಿ ದೆಹಲಿ ಹೈಕೋರ್ಟ್​ ಮೊರೆ ಹೋಗಿದ್ದರು. ವಿಚಾರಣೆ ನಡೆಯುತ್ತಿರುವಾಗ ತನಗೆ ಗ್ರಹಚಾರ ಬರುತ್ತದೆ ಎಂದು ತಿಳಿದ ತಕ್ಷಣ ಮಹಿಳೆ ಆತನೊಂದಿಗೆ ತಾನು ಒಪ್ಪಂದ ಮಾಡಿಕೊಂಡಿದ್ದು ದೂರನ್ನು ವಾಪಸು ಪಡೆದುಕೊಳ್ಳುತ್ತೇನೆ ಎಂದಳು. ಕೊನೆಗೆ ತಾನು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಖಿನ್ನತೆಗೆ ಜಾರಿದ್ದರಿಂದ ಹೀಗೆ ಕೇಸ್​ ದಾಖಲು ಮಾಡಿದ್ದೆ ಎಂದು ಒಪ್ಪಿಕೊಂಡಳು. ಸಾಮಾನ್ಯವಾಗಿ ಹೀಗೆ ಮಾಡಿದ ತಕ್ಷಣ ಅಲ್ಲಿಗೆ ಕೇಸನ್ನು ಕ್ಲೋಸ್​ ಮಾಡಲಾಗುತ್ತದೆ. ಆರೋಪಿ ಸ್ಥಾನದಲ್ಲಿ ಇರುವವನ್ನು ಖುಲಾಸೆಗೊಳಿಸಿ ಪ್ರಕರಣವನ್ನು ಮುಕ್ತಾಯ ಮಾಡಲಾಗುತ್ತದೆ.

ಆದರೆ, ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಇಂಥ ಆರೋಪ ಮಾಡುವ ಮೂಲಕ ಒಬ್ಬ ಪುರುಷನಿಗೆ ಎಷ್ಟು ಮಾನಸಿಕ ಹಿಂಸೆ ನೀಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಮಹಿಳೆಯ ನಡವಳಿಕೆ ಅತ್ಯಂತ ಅನುಚಿತವಾಗಿದೆ. ನಾಲ್ಕು ಮಕ್ಕಳ ತಾಯಿಯಾಗಿ ಇಂಥದ್ದೊಂದು ಕೆಟ್ಟ ಆರೋಪ ಮಾಡಿರುವುದನ್ನು ನಾವು ಸಹಿಸುವುದಿಲ್ಲ. ಇಂಥ ಆರೋಪಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದ ನ್ಯಾಯಮೂರ್ತಿಗಳು, ಮಹಿಳೆಗೆ ಶಿಕ್ಷೆ ನೀಡಿದ್ದಾರೆ.

ಎರಡು ತಿಂಗಳು ಅಂಧ ಮಕ್ಕಳ ಶಾಲೆಯಲ್ಲಿ ಸೇವೆ ಸಲ್ಲಿಸಬೇಕು. ದಿನಕ್ಕೆ ಮೂರು ಗಂಟೆಗಳಂತೆ ವಾರದಲ್ಲಿ 5 ದಿನ ಸೇವೆ ಸಲ್ಲಿಸಬೇಕು. ಮಾತ್ರವಲ್ಲದೇ 50 ಗಿಡಗಳನ್ನು ನೆಟ್ಟು ಐದು ವರ್ಷ ಆರೈಕೆ ಮಾಡಬೇಕು ಎಂದು ಕೋರ್ಟ್​ ಮಹಿಳೆಗೆ ಹೇಳಿದೆ. (ಏಜೆನ್ಸೀಸ್​)