ನ್ಯೂಸ್

ಕಾನೂನಿನಾಚೆ ಮಾನವೀಯ ಆದೇಶ: ಅಪ್ರಾಪ್ತರ ಮದುವೆಗೆ ಕೋರ್ಟ್‌ನಿಂದ ಅಸ್ತು: ಲೈಂಗಿಕ ಸಂಪರ್ಕವಾದರೂ ನೀಡದ ಶಿಕ್ಷೆ

ಪಟ್ನಾ: ಆತ ಬಾಲಕಿ, ಈಕೆ ಬಾಲಕಿ... ಆತನ ವಯಸ್ಸು 17, ಇವಳದ್ದು 16. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಪ್ರಾಪ್ತರಾಗಿರುವ ಇವರ ಪ್ರೀತಿಗೆ ಪಾಲಕರು ವಿರೋಧ ಒಡ್ಡಿದರು. ಆದರೆ ಮನೆಯಲ್ಲಿ ಹೇಳಿದೇ ಕೇಳದೇ ಇಬ್ಬರೂ ಅದೊಂದು ದಿನ ಪರಾರಿಯಾದರು. ಒಟ್ಟಿಗೇ ಇರತೊಡಗಿದರು. ಈ ನಡುವೆ ಅವರಿಗೆ ಒಂದು ಮಗುವೂ ಆಯಿತು!

ಆದರೆ ಇತ್ತ ಬಾಲಕಿಯ ಪಾಲಕರು ಅಪಹರಣ ಕೇಸ್‌ ದಾಖಲು ಮಾಡಿದ್ದರು, ಮಗಳಿಗಾಗಿ ಶೋಧ ಕಾರ್ಯ ನಡೆಸಿದ್ದರು. ಅಂತೂ ಕೊನೆಗೆ ಇಬ್ಬರೂ ಸಿಕ್ಕಿಬಿದ್ದರು. ಬಾಲಕನ ವಿರುದ್ಧ ಅಪಹರಣ ಕೇಸ್‌ ದಾಖಲಾಯ್ತು.

ಈ ಕೇಸ್‌ ಅನ್ವಯ ಸಾಮಾನ್ಯವಾಗಿ ಕೋರ್ಟ್‌ ತೆಗೆದುಕೊಳ್ಳುವ ತೀರ್ಮಾನದಂತೆ ಬಾಲಕನಿಗೆ 3 ರಿಂದ 10 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇತ್ತು. ಏಕೆಂದರೆ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಹಾಗೂ ದೈಹಿಕ ಸಂಪರ್ಕ ಬೆಳೆಸಿದ ಗಂಭೀರ ಆರೋಪದಡಿ ಆತನ ವಿರುದ್ಧ 366ಎ ಅಡಿ ದೂರು ದಾಖಲಾಗಿತ್ತು.

ಈ ಕೇಸ್‌ ಕೋರ್ಟ್‌ಗೆ ಹೋಯಿತು. ಆದರೆ ಅಚ್ಚರಿಯ ಹಾಗೂ ಕುತೂಹಲವೆಂಬಂತೆ ಕೋರ್ಟ್‌ ಬಾಲಕನನ್ನು ಖುಲಾಸೆಗೊಳಿಸಿದೆ, ಅರ್ಥಾತ್‌ ಆರೋಪಮುಕ್ತಗೊಳಿಸಿದೆ.

ತಮ್ಮ ಆದೇಶ ಈ ರೀತಿ ಏಕೆ ಎಂದು ಸ್ಪಷ್ಟನೆ ನೀಡಿರುವ ನ್ಯಾಯಾಧೀಶರು, ನಿಜ ಇಬ್ಬರೂ ಅಪ್ರಾಪ್ತರು. ಬಾಲಕನ ವಿರುದ್ಧ ಕೇಸ್‌ ಆಗಿದೆ. ಆತನಿಗೆ ಗಂಭೀರ ಶಿಕ್ಷೆಯೂ ಆಗುತ್ತದೆ. ಆದರೆ ಕಾನೂನನ್ನು ಬದಿಗಿಟ್ಟು ನೋಡುವುದಾದರೆ, ಬಾಲಕಿ ಸ್ವ ಇಚ್ಛೆಯಿಂದ ಹೋಗಿರುವುದಾಗಿ ಹೇಳಿಕೆ ನೀಡಿದ್ದಾಳೆ. ಇದಷ್ಟೇ ಅಲ್ಲ, ಇಬ್ಬರ ಮದುವೆಯಾಗಿ, ದೈಹಿಕ ಸಂಪರ್ಕವೂ ಆಗಿ ಅದರ ಫಲವಾಗಿ ಮಗು ಜನಿಸಿದೆ. ಒಂದು ವೇಳೆ ಬಾಲಕನಿಗೆ ಶಿಕ್ಷೆ ನೀಡಿದರೆ ಆಕೆ ಹಾಗೂ ಮಗುವಿನ ಗತಿ ಏನಾಗುತ್ತಿತ್ತು? ಇಬ್ಬರ ಮೇಲೂ ಗಂಭೀರ ಪರಿಣಾಮ ಬೀರುತ್ತಿತ್ತು. ಪಾಲಕರ ಮನೆಗೆ ಹೋಗಲು ಒಪ್ಪದ ಆಕೆ ಅಥವಾ ಪಾಲಕರು ಆಕೆಯನ್ನು ಪಡೆಯಲು ನಿರಾಕರಿಸಿದರೆ ಅವಳನ್ನು ಸ್ತ್ರೀನಿಕೇತನಕ್ಕೆ ಕಳುಹಿಸಬೇಕಾಗಿತ್ತು. ಬಾಲಕಿಯಾಗಿರುವ ಆಕೆ ತನ್ನ ಮಗುವಿನ ಆರೈಕೆಯನ್ನು ಒಂಟಿಯಾಗಿ ಮಾಡಬೇಕಿತ್ತು. ತಂದೆಯಿಲ್ಲದ ಆ ಮಗುವಿನ ಮೇಲೆ ಇದು ತುಂಬಾ ಪರಿಣಾಮ ಬೀರುವ ಸಾಧ್ಯತೆ ಇತ್ತು.

ಇದು ಮೂರು ಜೀವಗಳ ಮೇಲೆ ಪ್ರಭಾವ ಬೀರುತ್ತಿತ್ತು. ಇಷ್ಟೇ ಆಗಿದ್ದರೂ ಪರವಾಗಿರಲಿಲ್ಲ. ಆದರೆ, ಮರ್ಯಾದಾ ಹತ್ಯೆ ನಡೆಯುವ ಸಾಧ್ಯತೆ ಹೆಚ್ಚಾಗಿತ್ತು. ಹೀಗಾದರೆ ಆ ಪುಟ್ಟ ಕಂದನ ಗತಿ? ಬಾಲಕನಿಗೆ ಶಿಕ್ಷೆ ಕೊಟ್ಟರೆ ಬಾಲಕಿ ಪ್ರಾಪ್ತಳಾದ ಮೇಲೆ ಯಾರೂ ಮದುವೆಯಾಗುತ್ತಿರಲಿಲ್ಲ. ಮದುವೆಯಾಗಿದ್ದರೂ ಮಗು ಅನಾಥವಾಗುತ್ತಿತ್ತು. ಇವೆಲ್ಲವನ್ನೂ ಪರಿಗಣಿಸಿ ಬಾಲಕನನ್ನು

ಖುಲಾಸೆ ಮಾಡಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಅಂದಹಾಗೆ 2019ರಲ್ಲಿ ಇವರ ಮದುವೆ ನಡೆದಿದೆ. ಈಗ ಬಾಲಕನಿಗೆ 19 ವರ್ಷ ಹಾಗೂ ಬಾಲಕಿ ಕಾನೂನಿನ ಅನ್ವಯ ಈಗ ಯುವತಿಯಾಗಿದ್ದು ಅವಳಿಗೀಗ 18 ವರ್ಷ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ