ನ್ಯೂಸ್

ಫೇಸ್​ಬುಕ್​ನಲ್ಲಿ ಕಪಲ್​ ಚಾಲೆಂಜ್...​ ಎಚ್ಚರ ಎಚ್ಚರ... ಪೊಲೀಸರು ಬಿಚ್ಚಿಟ್ಟಿದ್ದಾರೆ ಭಯಾನಕ ಮಾಹಿತಿ

suchetana

ಪುಣೆ: ಇದೀಗ ಫೇಸ್​ಬುಕ್​ನಲ್ಲಿ ಕಪಲ್​ ಚಾಲೆಂಜ್​, ಸಿಂಗಲ್​ ಚಾಲೆಂಜ್​, ಫ್ಯಾಮಿಲಿ ಚಾಲೆಂಜ್​ ಎಂಬ ಟ್ರೆಂಡ್​ಗಳು ಶುರುವಾಗಿದೆ. ತಾವು ಒಂಟಿಯಾಗಿರುವ, ಸಂಗಾತಿ ಜತೆಗಿರುವ, ಕುಟುಂಬದ ಜತೆಗಿರುವ ಫೋಟೋಗಳನ್ನು ಅಪ್​ಲೋಡ್​ ಮಾಡಲಾಗುತ್ತಿದೆ. ಇದಾಗಲೇ ಲಕ್ಷಾಂತರ ಮಂದಿ ತಮ್ಮ ಫೋಟೋಗಳನ್ನು ಅಪ್​ಲೋಡ್​ ಮಾಡಿದ್ದಾರೆ.

ಆದರೆ ಈ ಚಾಲೆಂಜ್​ ಹೆಸರಿನಲ್ಲಿ ಆಗುತ್ತಿರುವ ಭಯಾನಕ ಸತ್ಯವನ್ನು ಪುಣೆ ಪೊಲೀಸರು ಬಿಚ್ಚಿಟ್ಟಿದ್ದಾರೆ. ಟ್ವೀಟರ್​ ಮೂಲಕ ಮಾಹಿತಿ ನೀಡಿರುವ ಪೊಲೀಸರು, ದಯವಿಟ್ಟು ಇಂಥ ಚಾಲೆಂಜ್​ಗಳನ್ನು ಸ್ವೀಕರಿಸುವ ಮುನ್ನ ಬಹಳ ಜಾಗರೂಕರಾಗಿ ಇರಬೇಕು ಎಂದು ಹೇಳಿದ್ದಾರೆ.

ಇದಾಗಲೇ ತಮಗೆ ದೂರುಗಳು ಬಂದಿರುವ ಮಾಹಿತಿಯನ್ನು ಆಧರಿಸಿ ಈ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಕಪಲ್​ ಚಾಲೆಂಜ್​ನಲ್ಲಿ ಹಾಕಿರುವ ಫೋಟೋಗಳನ್ನು ತಿರುಚಿ, ಅದನ್ನು ಪೋರ್ನ್​ ವೆಬ್​ಸೈಟ್​ಗಳಿಗೆ ಅಪ್​ಲೋಡ್​ ಮಾಡುವ ಮೂಲಕ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂಥ ಫೋಟೋಗಳನ್ನು ದುರುಪಯೋಗ ಪಡಿಸಿಕೊಂಡಿರುವ ಹಲವಾರು ಕಂಪ್ಲೇಂಟ್​ಗಳು ತಮಗೆ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸಾಮಾನ್ಯವಾಗಿ ಫೇಸ್​ಬುಕ್​ಗೆ ಹಾಕುವ ವೈಯಕ್ತಿಯ ಫೋಟೋಗಳ ಬಗ್ಗೆ ಇದಾಗಲೇ ಸಾಕಷ್ಟು ಎಚ್ಚರಿಕೆ ಸಂದೇಶಗಳು ಬರುತ್ತಿರುವ ನಡುವೆಯೇ ಕಪಲ್​ ಚಾಲೆಂಜ್​ ಹೆಸರಿನಲ್ಲಿ ಆಗುತ್ತಿರುವ ದುರ್ಬಳಕೆ ಕುರಿತಂತೆ ತುಂಬಾ ಜಾಗರೂಕರಾಗಿ ಇರಬೇಕು. ಇಂಥ ಚಾಲೆಂಜ್​ಗಳನ್ನು ಸ್ವೀಕರಿಸುವಾಗ ಎಚ್ಚರಿಕೆ ವಹಿಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್​ಲೋಡ್​ ಮಾಡುವ ಮೊದಲು ಎರಡೆರಡು ಬಾರಿ ಯೋಚಿಸಿ ಎಂದು ಟ್ವಿಟ್ಟರ್ ಖಾತೆಯ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ಯಾವುದೇ ಅನುಮಾನ ಮೂಡಿದರೂ ಕೂಡಲೇ ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದೂ ಪುಣೆ ಪೊಲೀಸರು ತಿಳಿಸಿದ್ದಾರೆ.