ನ್ಯೂಸ್

ಕರೊನಾ ಲಸಿಕೆ ಚುಚ್ಚಿಕೊಳ್ಳೋ ಬದಲು ಇಲ್ಲಿ ಜನ ತಿಂತಾರಂತೆ! ವಿಡಿಯೋ ನೋಡಿ...

suchetana

ಜರ್ಮನಿ: ಭಾರತದಲ್ಲಿ ಕರೊನಾ ಲಸಿಕೆಯ ಬಗ್ಗೆ ರಾಜಕಾರಣಿಗಳು ವಾದ-ಪ್ರತಿವಾದ ಮಾಡುತ್ತಿದ್ದಾರೆ. ಜನರು ನಮಗೆ ಲಸಿಕೆ ಯಾವಾಗ ಸಿಗುತ್ತೇ, ಅಡ್ಡಪರಿಣಾಮ ಆಗುತ್ತಾ ಎಂದೆಲ್ಲಾ ತಲೆಕೆಡಿಸಿಕೊಂಡಿದ್ದಾರೆ. ಅದೇ ಜರ್ಮನಿಯಲ್ಲಿ ಜನರಿಗೆ ಕರೊನಾ ಲಸಿಕೆಯನ್ನು ತಿನ್ನಿಸುವ ಪ್ರಯತ್ನವೇ ನಡೆದಿದೆ!

ಆಶ್ಚರ್ಯಪಡಬೇಡಿ! ಕರೊನಾ ಲಸಿಕೆಯಂತೆ ಅಲಂಕರಿಸಿದ ಕೇಕ್​ಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುತ್ತಿರುವ ಬೇಕರಿಯ ಕಥೆಯಿದು.

ಜರ್ಮನಿಯ ಡಾರ್ಟ್​ಮಂಡ್​ನಲ್ಲಿರುವ ಶೂರೆನರ್ ಬಾಕ್ಪೆರಡೀಸ್ ಎಂಬ ಬೇಕರಿಯು ತನ್ನ ಮಾರ್ಬಲ್ ಕೇಕುಗಳಿಗೆ ಇಂಜೆಕ್ಷನ್ ಸಿರಿಂಜಿನಂತೆ ಆಕಾರ ನೀಡಿ, ಬಿಳಿಯ ಫಾಂಡೆಂಟ್​ನಿಂದ ಅಲಂಕರಿಸಿದೆ. ಅದರ ಮೇಲೆ '2021 -ಬಾಯ್ ಬಾಯ್ ಕರೊನಾ' ಎಂಬ ಸ್ಟಿಕರ್ ನಮೂದಿಸಿ ಕರೊನಾ ಲಸಿಕೆಯ ಬಿಡುಗಡೆಯ ಸಂಭ್ರಮ ಆಚರಿಸುತ್ತಿದೆ.

2020 ಕರೊನಾದಿಂದ ಜಗತ್ತೇ ಕಂಗಾಲಾದ ವರ್ಷ. ಈಗ 2021ರಲ್ಲಿ ಕರೊನಾ ಲಸಿಕೆಯ ದೆಸೆಯಿಂದಾಗಿ ಜನರಿಗೆ ಹೊಸ ಆಶಾಕಿರಣ ಕಂಡಿದೆ. ಜರ್ಮನಿಯೂ ಸೇರಿದಂತೆ ಹಲವು ದೇಶಗಳಲ್ಲಿ ಕರೊನಾ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವ ಈ ಸಮಯದಲ್ಲಿ ವಿಭಿನ್ನ ಡಿಸೈನಿನ ಕೇಕ್ ಮಾಡಿ ಈ ಬೇಕರಿ ಗಮನ ಸೆಳೆದಿದೆ.

"ಇದು ಯಾವುದೇ ಅಡ್ಡಪರಿಣಾಮ ಹೊಂದಿಲ್ಲದ ಲಸಿಕೆ. ಮೇಲಾಗಿ ರುಚಿಕರವಾದ್ದರಿಂದ ನೀವು ಮತ್ತೊಂದನ್ನು ಪಡೆಯಬಹುದು" ಎಂದಿದ್ದಾರೆ, ಬೇಕರಿಯ ಮಾಲಿಕ ಟಿಮ್ ಕೊರ್ಟೀಮ್ .

ಈ ಮುನ್ನ ಇದೇ ಬೇಕರಿಯು ಪಾಶ್ಚಿಮಾತ್ಯ ದೇಶಗಳಲ್ಲಿ ಟಾಯ್ಲೆಟ್​ ಪೇಪರ್ ಸ್ಟಾಕ್ ಖಾಲಿಯಾದ ಹಿನ್ನೆಲೆಯಲ್ಲಿ ಟಾಯ್ಲೆಟ್ ಪೇಪರ್ ರೋಲಿನ ಹಾಗೆ ಕೇಕ್ ಮಾಡಿದ್ದೂ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆದಿತ್ತು.