ನ್ಯೂಸ್

ಸೋಂಕಿತನನ್ನು ಸಾಗಿಸಲು ಹಿಂದೇಟು- ಆಂಬುಲೆನ್ಸ್‌ ಚಲಾಯಿಸಿ ಆಸ್ಪತ್ರೆಗೆ ಸಾಗಿಸಿದ ಸಚಿವ!

ಭುವನೇಶ್ವರ: ಕರೊನಾ ಸೋಂಕಿನ ಎರಡನೆಯ ಅಲೆ ಹೆಜ್ಜೆ ಹೆಜ್ಜೆಗೂ ಭೀಕರ ಪರಿಣಾಮ ಬೀರುತ್ತಿರುವ ನಡುವೆಯೇ ಸೋಂಕಿತರನ್ನು ಕೇಳುವವರೇ ಗತಿಯಿಲ್ಲದಾಗಿದೆ. ಆಸ್ಪತ್ರೆಗಳಲ್ಲಿ ಬೆಡ್‌ ಇಲ್ಲ, ಆಕ್ಸಿಜನ್‌ ಇಲ್ಲದೇ ಜನರು ಮೃತಪಡುವುದು ಒಂದೆಡೆಯಾದರೆ ಮನೆ ಮಂದಿಯೆಲ್ಲರೂ ಸೋಂಕಿಗೆ ಒಳಗಾಗಿ ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಅಸಹಾಯಕರಾಗಿರುವವರ ಎಷ್ಟೋ ಮಂದಿ.

ಇಂಥದ್ದೇ ಒಂದು ಘಟನೆ ಒಡಿಶಾದಲ್ಲಿಯೂ ನಡೆದಿದೆ. ಬರ್ಗಾರ್ಹ್ ಜಿಲ್ಲೆಯ ತಬದಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ ಯುವಕನೊಬ್ಬನಿಗೆ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಕೂಡಲೇ ಚಿಕಿತ್ಸೆಯ ಅಗತ್ಯವಿತ್ತು. ಆದರೆ ಆತನನ್ನು ಆಸ್ಪತ್ರೆಗೆ ಸಾಗಿಸಲು ಕುಟುಂಬಸ್ಥರು ಯಾರೂ ಇರಲಿಲ್ಲ. ಉಳಿದವರು ಹಿಂದೇಟು ಹಾಕುತ್ತಿದ್ದರು.

ಸಮೀಪವೇ ಅಂಬುಲೆನ್ಸ್‌ ಇದ್ದರೂ ಚಾಲಕನಿರಲಿಲ್ಲ. ಈ ಬಗ್ಗೆ ಅರಿತ ಭಟ್ಲಿ ಕ್ಷೇತ್ರದ ಬಿಜೆಡಿ (ಬಿಜು ಜನತಾ ದಳ್‌) ಶಾಸಕ, ಒಡಿಶಾ ರಾಜ್ಯದ ಕಾರ್ಮಿಕ ಸಚಿವರಾದ ಸುಶಾಂತ್ ಸಿಂಗ್ ಅವರು ಹಿಂದೆ ಮುಂದೆ ಯೋಚನೆ ಮಾಡದೇ ತಾವೇ ಅಂಬುಲೆನ್ಸ್‌ ಚಲಾಯಿಸಿಕೊಂಡು ಸೋಂಕಿತನನ್ನು ಆಸ್ಪತ್ರೆಗೆ ದಾಖಲು ಮಾಡಿ ಬಂದಿದ್ದಾರೆ. ಆತನಿಗೆ ಸರಿಯಾದ ಚಿಕಿತ್ಸೆ ನೀಡುವಂತೆಯೂ ಆಸ್ಪತ್ರೆಯ ವೈದ್ಯರಿಗೆ ಸೂಚನೆ ನೀಡಿ ಬಂದಿದ್ದಾರೆ.