ನ್ಯೂಸ್

ಮಹಿಳೆಯನ್ನು ಕೊಂದು ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ತಿಂದ- ಸಂಬಂಧಿಕರನ್ನೂ ಕೊಲೆ ಮಾಡಿದ!

ವಾಷಿಂಗ್ಟನ್: ಮನುಷ್ಯನ ವಿಕಾರ ಮನೋಭಾವಕ್ಕೆ ಕೊನೆಯೇ ಇಲ್ಲವೇ ಎನ್ನುವಂಥ ಭೀಕರ, ಭಯಾನಕ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಅಂಥದ್ದೇ ಒಂದು ಭೀಕರ ಘಟನೆ ಇದೀಗ ಅಮೆರಿಕದ ಒಕ್ಲಾಹೋಮಿನಲ್ಲಿ ನಡೆದಿದೆ.

ಮೂರು ಮಂದಿಯನ್ನು ಕೊಲೆ ಮಾಡಿರುವ ಪಾತಕಿಯೊಬ್ಬನ ಭಯಾನಕ ಘಟನೆಯಿದು. ಮೊದಲು ಮಹಿಳೆಯೊಬ್ಬಳನ್ನು ಕೊಲೆ ಮಾಡಿರುವ ಈ ಪಾತಕಿ, ಆಕೆಯ ಹೃದಯವನ್ನು ಬಗೆದು ಅದನ್ನು ಆಲೂಗಡ್ಡೆ ಜತೆ ಬೇಯಿಸಿ ತಂದಿದ್ದಾನೆ! ಹೀಗೆ ಬೇಯಿಸಿದ ಪದಾರ್ಥವನ್ನು ತನ್ನ ಚಿಕ್ಕಪ್ಪ ಮತ್ತು ಅವರ ಪತ್ನಿ, ಮಗಳಿಗೆ ನೀಡಿದ್ದಾನೆ. ನಂತರ ಚಿಕ್ಕಪ್ಪ ಮತ್ತು ಪುತ್ರಿಯ ಕೊಲೆ ಮಾಡಿದ್ದಾನೆ.

ಈ ಮೂವರ ಕೊಲೆ ಮಾಡಿರುವ ಈತ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಈ ಭಯಾನಕ ಕೃತ್ಯ ಬಾಯಿಬಿಟ್ಟಿದ್ದಾನೆ. ಈತನ ಹೆಸರು ಲಾರೆನ್ಸ್ ಪಾಲ್ ಅಂಡರ್ಸನ್.

ಡ್ರಗ್‌ ಎಡಿಕ್ಟ್‌ ಆಗಿರುವ ಲಾರೆನ್ಸ್‌ಗೆ ಇದಾಗಲೇ ಮಾದಕದ್ರವ್ಯಗಳ ಕೇಸ್‌ನಲ್ಲಿ 20 ವರ್ಷಗಳ ಶಿಕ್ಷೆಯಾಗಿದೆ. ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಆತ ಬಿಡುಗಡೆ ಹೊಂದಿ ಈ ಕೃತ್ಯ ಎಸಗಿದ್ದಾನೆ. ಈ ಕೊಲೆಗೆ ನಿಖರ ಕಾರಣವೇನು ಎಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಮೊದಲು ಆತ ಕೊಂದಿರುವುದು ನೆರೆಮನೆಯ ಮಹಿಳೆಯನ್ನು. ನಂತರ ಆಕೆಯ ಹೃದಯವನ್ನು ಶರೀರದಿಂದ ಹೊರಕ್ಕೆ ತೆಗೆದು ಆಲೂಗಡ್ಡೆ ಜತೆ ಬೇಯಿಸಿದ್ದಾನೆ. ಇದರ ಪದಾರ್ಥವನ್ನು ತಾನು ತಿಂದು, ಉಳಿದದ್ದನ್ನು ಚಿಕ್ಕಪ್ಪನ ಮನೆಗೆ ಒಯ್ದಿದ್ದಾನೆ. ಅಲ್ಲಿ ಚಿಕ್ಕಪ್ಪ, ಅವರ ಪತ್ನಿ ಹಾಗೂ ನಾಲ್ಕು ವರ್ಷದ ಪುತ್ರಿಕೆ ಅವರಿಗೂ ತಿನ್ನಲು ಹೇಳಿದ್ದಾನೆ. ಅವರು ಒಪ್ಪದಿದ್ದಾಗ ಬಲವಂತವಾಗಿ ತಿನ್ನಿಸಿದ್ದಾನೆ.

ನಂತರ ಚಿಕ್ಕಪ್ಪ ಮತ್ತು ಪುತ್ರಿಯನ್ನು ಕೊಲೆ ಮಾಡಿದ್ದಾನೆ. ಚಿಕ್ಕಮ್ಮನ ಮೇಲೆ ಬಲವಾಗಿ ಹಲ್ಲೆ ನಡೆಸಿದ್ದರೂ ಅವರು ಬದುಕುಳಿದಿದ್ದಾರೆ. ಸದ್ಯ ಈತನ ವಿಚಾರಣೆ ನಡೆಯುತ್ತಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ