ಲಾಸ್ ಏಂಜಲೀಸ್: ಅಮೆರಿಕದ ಲಾಲ್ ಏಂಜಲೀಸ್‌ನಲ್ಲಿ ಭಾರತೀಯ ಕಾಲಮಾನದ ನಸುಕಿನ 5.30ರ ವೇಳೆಗೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಇದರಲ್ಲಿ ಚೀನಾದ ಯುವತಿಗೆ ಆಸ್ಕರ್ ಪ್ರಶಸ್ತಿ ಲಭಿಸಿದೆ.
93ನೇ ಆಸ್ಕರ್ ಪ್ರಶಸ್ತಿಗೆ ಕ್ಲೋಯಿ ಜಾವ್ ಭಾಜನರಾಗಿದ್ದಾರೆ. ಇವರ ನೋಮಡ್ಲ್ಯಾಂಡ್ ಚಿತ್ರದ ನಿರ್ದೇಶನಕ್ಕಾಗಿ 'ಅತ್ಯುತ್ತಮ ನಿರ್ದೇಶಕಿ' ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಮೂಲಕ ಆಸ್ಕರ್ನಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ಮಹಿಳೆ ಎಂಬ ಹೆಮ್ಮೆ ಕ್ಲೋಯಿ ಅವರದ್ದು.
ಆಸ್ಕರ್ ಇತಿಹಾಸದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಎರಡನೇ ಮಹಿಳೆಯಾಗಿಯೂ ಇವರು ಹೊರಹೊಮ್ಮಿದ್ದಾರೆ. ಡೆನ್ಮಾರ್ಕ್ನ 'ಅನದರ್ ರೌಂಡ್' ಸಿನಿಮಾಗೆ ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ಗೌರವ ಸಿಕ್ಕಿದೆ. ಕನ್ನಡದ ಜಲ್ಲಿಕಟ್ಟು ಸಿನಿಮಾ ಕೂಡ ಈ ಪ್ರಶಸ್ತಿಗೆ ಪ್ರವೇಶ ಪಡೆದಿತ್ತು. ಆದರೆ ಅಂತಿಮ ಸುತ್ತಿಗೆ ನಾಮನಿರ್ದೇಶನಗೊಳ್ಳುವಲ್ಲಿ ಇದು ವಿಫಲವಾಗಿದೆ.
'ಪ್ರಾಮಿಸಿಂಗ್ ಎಂಗ್ ವುಮನ್' ಚಿತ್ರಕ್ಕೆ ಎಮೆರಲ್ಡ್ ಫೆನಲ್ ಅವರಿಗೆ ಬೆಸ್ಟ್ ಒರಿಜಿನಲ್ ಸ್ಕ್ರೀನ್ಪ್ಲೇ ಪ್ರಶಸ್ತಿ ಬಂದಿದೆ. ಜೂಡಸ್ ಆ್ಯಂಡ್ ಬ್ಲ್ಯಾಕ್ ಮೇಷಿಯಾ ಚಿತ್ರದ ನಟನೆಗಾಗಿ ಡ್ಯಾನಿಯಲ್ ಕಲೂಯಾ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.
'ಮಿನಾರಿ' ಸಿನಿಮಾದಲ್ಲಿ ನಟಿಸಿರುವ 73ರ ಪ್ರಾಯದ ಯು ಜಂಗ್ ಯಾನ್ ಅವರಿಗೆ ಅತ್ತುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ. ಟೆನೆಟ್ ಚಿತ್ರಕ್ಕೆ ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ ಪ್ರಶಸ್ತಿ ಸಿಕ್ಕಿದ್ದು, ಅತ್ಯುತ್ತಮ ಧ್ವನಿ ವಿನ್ಯಾಸ ಮತ್ತು ಅತ್ಯುತ್ತಮ ಸಂಕಲನ ಪ್ರಶಸ್ತಿಯನ್ನು 'ಸೌಂಡ್ ಆಫ್ ಮೆಟಲ್' ಚಿತ್ರ ಬಾಚಿಕೊಂಡಿದೆ. ಅತ್ಯುತ್ತಮ ಕೇಶವಿನ್ಯಾಸ ಹಾಗೂ ಅತ್ಯುತ್ತಮ ಮೇಕಪ್ ವಿಭಾಗದಲ್ಲಿ 'ಮಾ ರೇನೀಸ್ ಬ್ಲ್ಯಾಕ್ ಬಾಟಮ್' ಚಿತ್ರ ಪ್ರಶಸ್ತಿ ಪಡೆದಿದ್ದರೆ ಅತ್ಯುತ್ತಮ ಛಾಯಾಗ್ರಹಣ ಮತ್ತು ಅತ್ಯುತ್ತಮ ನಿರ್ಮಾಣ ವಿನ್ಯಾಸ ಪ್ರಶಸ್ತಿ ಮಾಂಕ್ ಚಿತ್ರಕ್ಕೆ ಸಿಕ್ಕಿದೆ.