ನ್ಯೂಸ್

ಸಂಸ್ಕರಿಸಿಟ್ಟ ಮಾಂಸ ಕೊಳ್ಳುವವರಿಗೆ ಚೀನಾ ನೀಡಿದೆ ಎಚ್ಚರಿಕೆಯ ಗಂಟೆ!

ಬೀಜಿಂಗ್‌: ಮಾಲ್‌ ಹಾಗೂ ಹಲವಾರು ಮಳಿಗೆಗಳಲ್ಲಿ ಮಾಂಸ, ಮೀನುಗಳನ್ನು ಕೂಡ ಈಗ ಸಂಸ್ಕರಿಸಿ ಇಡುವುದು ಮಾಮೂಲು. ಅವುಗಳು ದೇಹಕ್ಕೆ, ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದರ ಬಗ್ಗೆ ಹಲವಾರು ತಜ್ಞರು ಎಚ್ಚರಿಕೆ ಕೊಡುತ್ತಲೇ ಬಂದಿದ್ದರೂ ಕೆಲವರು ಅವುಗಳನ್ನು ಖರೀದಿಸುತ್ತಿದ್ದಾರೆ.

ಆದರೆ ಇದೀಗ ಕರೊನಾ ತವರು ಚೀನಾದಿಂದಲೇ ಎಚ್ಚರಿಕೆಯೊಂದು ಬಂದಿದೆ. ಸಂಸ್ಕರಿಸಿಟ್ಟ ಚಿಕನ್‌ ಸೇರಿದಂತೆ ಮಾಂಸದ ಉತ್ಪನ್ನಗಳನ್ನು ಖರೀದಿಸುವವರಿಗೆ ಖುದ್ದು ಚೀನಾವೇ ಎಚ್ಚರಿಕೆ ನೀಡಿದ್ದು, ಹೀಗೆ ಖರೀದಿ ಮಾಡಿದರೆ ಅಪಾಯ ಕಟ್ಟಿಟ್ಟದ್ದು ಎಂದು ಹೇಳಿದೆ.

ಚೀನಾದ ಶೆನ್‍ಜೆನ್‌ನಲ್ಲಿನ ಗ್ರಾಹಕರು ಆಮದು ಮಾಡಿಕೊಂಡಿರುವ ಸಂಸ್ಕರಿತ ಆಹಾರದಲ್ಲಿ ಅದರಲ್ಲಿಯೂ ಹೆಚ್ಚಾಗಿ ಚಿಕನ್‌ನಲ್ಲಿ ಕರೊನಾ ಪಾಸಿಟಿವ್‌ ಇರುವುದು ತಿಳಿದುಬಂದಿದೆ ಎಂದು ಚೀನಾ ಹೇಳಿದೆ. ಬ್ರೆಜಿಲ್‌ನಲ್ಲಿ ಆಮದು ಮಾಡಿಕೊಂಡಿರುವ ಈ ಚಿಕನ್‌ ಪ್ಯಾಕೆಟ್‌ನಿಂದ ಕರೊನಾ ದೃಢಪಟ್ಟಿರುವುದಾಗಿ ವರದಿ ಹೇಳಿದೆ.

ಸಂಸ್ಕರಿಸಿ ಇಟ್ಟಿರುವ ಚಿಕನ್‌ನ ಮೇಲ್ಭಾಗವನ್ನು ಪರೀಕ್ಷೆಗೆ ಒಳಪಡಿಸಿದಾಗ ಕರೊನಾ ಸೋಂಕು ದೃಢಪಟ್ಟಿದ್ದು, ಇದನ್ನು ಯಾರೂ ಖರೀದಿ ಮಾಡದಂತೆ ಚೀನಾ ತನ್ನ ಜನತೆಗೆ ಎಚ್ಚರಿಕೆ ನೀಡಿದೆ.

ಚೀನಾದ ಶಾಂಡೊಂಗ್ ಪ್ರಾಂತ್ಯದ ಉತ್ತರ ನಗರವಾದ ಯಾಂಟೈನಲ್ಲಿಆಮದು ಮಾಡಿಕೊಂಡಿರುವ ಸಮುದ್ರ ಆಹಾರಗಳು ಹಾಗೂ ಚಿಕನ್‌ಗಳಲ್ಲಿ ಪಾಸಿಟಿವ್‌ ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೇ ಚೀನಾದ ಅನ್ಹುಯಿ ಪ್ರಾಂತ್ಯದ ವುಹು ಎಂಬಲ್ಲಿನ ರೆಸ್ಟೋರೆಂಟ್‌ನಲ್ಲಿ ಈಕ್ವೆಡಾರ್ ಸೀಗಡಿ ಪ್ಯಾಕೇಜ್‌ನ ಹೊರಭಾಗದಲ್ಲಿ ಕೂಡ ಕರೊನಾ ಪಾಸಿಟಿವ್‌ ಇರುವುದು ಬೆಳಕಿಗೆ ಬಂದಿರುವುದಾಗಿ ಚೀನಾ ಹೇಳಿದೆ.