ಮುಂಬೈ: ಹೇಳಿಕೊಳ್ಳಲು ಈತನೊಬ್ಬ ಧಾರಾವಾಹಿ ನಟ. ಹಿಂದಿ ಧಾರಾವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರ ನಿರ್ವಹಿಸುತ್ತಿದ್ದ ಈತದ ಇತಿಹಾಸ ಬಲು ಭಯಾನಕವಾಗಿದೆ.
ಮುಂಬೈನಲ್ಲಿ ಇದ್ದುಕೊಂಡು ಭಾರತ ಮಾತ್ರವಲ್ಲದೇ, ಅಮೆರಿಕ, ಯುರೋಪ್ ಸೇರಿದಂತೆ ಹಲವಾರು ದೇಶಗಳಲ್ಲಿರುವ ಮಕ್ಕಳನ್ನು ಆನ್ಲೈನ್ ಮೂಲಕ ಮರಳು ಮಾಡುತ್ತಿದ್ದ ಈತ, ಅವರನ್ನು ಸೆಕ್ಸ್ ದಂಧೆಗೆ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಮಕ್ಕಳ ಮೇಲೆ ಕಣ್ಣಿಡುವ ಈತ, ಅವರನ್ನು ಜಾಲತಾಣದ ಮೂಲಕ ಫ್ರೆಂಡ್ ಮಾಡಿಕೊಂಡೋ ಅಥವಾ ಇನ್ನಾವುದೋ ರೀತಿಯಲ್ಲಿ ಪ್ರೀತಿಯಿಂದ ಮಾತನಾಡಿದ ಅವರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುವ ಮೂಲಕ, ಸೆಕ್ಸ್ ದಂಧೆಗೆ ಅವರನ್ನು ಬಳಸಿಕೊಳ್ಳುತ್ತಿದ್ದ.
ಈತನ ಬಗ್ಗೆ ಮಾಹಿತಿ ಪಡೆದ ಸಿಬಿಐ ಅಧಿಕಾರಿಗಳು ಈತನ ಕಚೇರಿಯ ಮೇಲೆ ದಾಳಿ ನಡೆಸಿದಾಗ ದಂಗಾಗುವಂಥ ಘಟನೆಗಳು ಬೆಳಕಿಗೆ ಬಂದಿವೆ. ಈತನ ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಅನೇಕ ವಸ್ತುಗಳನ್ನು ವಶಪಡಿಸಿಕೊಂಡು, ಅದನ್ನು ಪರಿಶೀಲನೆ ಮಾಡಿದಾಗ ಈ ನಟ ಇದಾಗಲೇ ಸಾವಿರಾರು ಮಕ್ಕಳನ್ನು ಸೆಕ್ಸ್ ಜಾಲದೊಳಕ್ಕೆ ಸೆಳೆದಿರುವ ಮಾಹಿತಿ ಸಿಕ್ಕಿದೆ.
ಒಂದು ಸಾವಿರಕ್ಕೂ ಅಧಿಕ ಮಕ್ಕಳನ್ನು ಇದಾಗಲೇ ಆನ್ಲೈನ್ ಮೂಲಕ ಸಂಪರ್ಕಿಸಿ, ಅವರನ್ನು ತನ್ನ ಹಿಡಿತಕ್ಕೆ ತಂದುಕೊಳ್ಳುವ ಪ್ರಯತ್ನ ನಡೆಸುತ್ತಿದುದು ತಿಳಿದುಬಂದಿದೆ. ಈತನ ವಿರುದ್ಧ ಪೋಕ್ಸೊ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: ಚುನಾವಣೆಗೆ ವಾರದ ಮೊದಲೇ ಆರು ಕೋಟಿ ಮತ ಚಲಾವಣೆ!
ಅಷ್ಟಕ್ಕೂ ಈತ ಮಾಡುತ್ತಿದ್ದುದು ಏನೆಂದರೆ, ಜಾಲತಾಣಗಳ ಮೂಲಕ ಮಕ್ಕಳನ್ನು ಮರಳು ಮಾಡುತ್ತಿದ್ದ.ತಾನೊಂದು ನಟ ಎಂದು ಹೇಳಿಕೊಳ್ಳುತ್ತಿದ್ದ ಈತ ಮಕ್ಕಳಿಗೆ ನಟನೆಯ ಇಲ್ಲವೇ ಇನ್ನಾವುದೋ ಆಸೆ ತೋರಿಸಿ ಅವರ ವಾಟ್ಸ್ಆ್ಯಪ್ ನಂಬರ್ ಪಡೆದುಕೊಳ್ಳುತ್ತಿದ್ದ. ನಂತರ ಅವರ ಅಶ್ಲೀಲ ಫೋಟೋಗಳನ್ನು ಕಳುಹಿಸುವಂತೆ ಪುಸಲಾಯಿಸುತ್ತಿದ್ದ. ಇದನ್ನು ತಿಳಿಯದ ಮಕ್ಕಳು ಹಾಗೆಯೇ ಮಾಡುತ್ತಿದ್ದರು. ನಂತರ ಕೆಲವೊಂದು ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅದರಂತೆಯೇ ಮಕ್ಕಳ ನಗ್ನವಾಗಿರುವ ವಿಡಿಯೋ ಕಳುಹಿಸಲು ಹೇಳುತ್ತಿದ್ದ. ಮಕ್ಕಳು ಆತ ತೋರಿಸುವ ಆಮಿಷಕ್ಕೆ ಬಲಿಯಾಗಿ ಅವನು ಹೇಳಿದಂತೆ ಮಾಡುತ್ತಿದ್ದರು.
ನಂತರ ಈ ವಿಡಿಯೋಗಳನ್ನು ವಿದೇಶಕ್ಕೆ ಮಾರಾಟ ಮಾಡಿ, ಅದರಿಂದ ಹಣ ಸಂಪಾದನೆ ಮಾಡುತ್ತಿದ್ದ. ತುಂಬಾ ಮುಗ್ಧ ಮಕ್ಕಳು ಇದ್ದರೆ ಅವರನ್ನು ತನ್ನ ಬಳಿಯೇ ಕರೆಸಿಕೊಂಡು ಅಸಭ್ಯ ವಿಡಿಯೋಗಳನ್ನೂ ಚಿತ್ರಿಸಿಕೊಳ್ಳುತ್ತಿದ್ದ. ಇವೆಲ್ಲವುಗಳನ್ನೂ ಮಾರಾಟ ಮಾಡುತ್ತಿದ್ದ.
ಮಕ್ಕಳ ಇಂಥ ಅಶ್ಲೀಲ ವಿಡಿಯೋಗಳನ್ನು ನೋಡುವುದಕ್ಕಾಗಿ ಭಾರತ ಮಾತ್ರವಲ್ಲದೇ ವಿದೇಶಗಳಿಂದಲೂ ಈತನಿಗೆ ಭಾರಿ ಬೇಡಿಕೆ ಬರುತ್ತಿತ್ತು.
ಈ ಬಗ್ಗೆ ಮಾಹಿತಿ ಪಡೆದ ಸಿಬಿಐ ಅಧಿಕಾರಿಗಳು ಇದೀಗ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಈತ ಹರಿದ್ವಾರ ಮೂಲದವನು ಎನ್ನಲಾಗಿದೆ. ಆದರೆ ಸದ್ಯ ಮಕ್ಕಳ ಹಿತದೃಷ್ಟಿಯಿಂದ ಈತನ ಹೆಸರನ್ನು ಅಧಿಕಾರಿಗಳು ಬಹಿರಂತಪಡಿಸಲಿಲ್ಲ.