ನ್ಯೂಸ್

ನಾಪತ್ತೆಯಾಗಿದ್ದ ಬಿಜೆಪಿ ಮುಖಂಡ ಮರದ ಮೇಲೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ: ಕೊಲೆ ಶಂಕೆ

ಶ್ರೀನಗರ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಿಜೆಪಿ ಮುಖಂಡ ಸೋಮ್​ರಾಜ್ ಅವರ ಮೃತದೇಹವು ಮರವೊಂದರ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೈ ಮೇಲೆ ರಕ್ತದ ಕಲೆಗಳು ಇರುವ ಹಿನ್ನೆಲೆಯಲ್ಲಿ ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.

ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ನಿವಾಸಿಯಾಗಿದ್ದ ಸೋಮ್​ರಾಜ್​ ಅವರು, ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಆದರೆ ಕುಟುಂಬವು ದೂರು ದಾಖಲಿಸಿರಲಿಲ್ಲ. ಇಂದು ಹೀರಾ ನಗರ ಪಟ್ಟಣದಲ್ಲಿರುವ ಮರವೊಂದರಲ್ಲಿ ಮೃತದೇಹ ಇದ್ದುದನ್ನು ಗ್ರಾಮಸ್ಥರೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಧಾವಿಸಿದಾಗ ಇದು ಬಿಜೆಪಿ ಮುಖಂಡನದ್ದು ಎಂದು ತಿಳಿದಿದೆ. ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೇಹದ ಮೇಲೆ ರಕ್ತದ ಕಲೆಗಳಿರುವ ಹಿನ್ನೆಲೆಯಲ್ಲಿ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಸೋಮ್​ರಾಜ್​ ಅವರ ನಿಧನಕ್ಕೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸೋಮ್‍ರಾಜ್ ಕುಟುಂಬಸ್ಥರು ಸೋಮ್‍ರಾಜ್‍ನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಸರ್ಕಾರ ತಮಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ (ಏಜೆನ್ಸೀಸ್​)