ನ್ಯೂಸ್

ಗಗನಚುಂಬಿ ಕಟ್ಟಡಗಳಿಗೆ ಅಪ್ಪಳಿಸಿ ಜೀವ ಕಳೆದುಕೊಳ್ತಿವೆ ಪಕ್ಷಿಗಳು- ಮೂಕಜೀವಿಗಳ ಹೆಣಗಳ ರಾಶಿ

ನ್ಯೂಯಾರ್ಕ್: ಆಧುನಿಕ ತಂತ್ರಜ್ಞಾನದ ಹೆಸರಿನಲ್ಲಿ ಮನುಷ್ಯ ಪರಿಸರಕ್ಕೆ ಮಾಡುತ್ತಿರುವ ಧಕ್ಕೆಗಳಿಗೆ ಮಿತಿಯೇ ಇಲ್ಲವಾಗಿದೆ. ಹೀಗೆಯೇ ಮುಂದುವರೆದರೆ ಕೊನೆಗೆ ಆತನೇ ಸರ್ವನಾಶವಾಗುವ ದಿನಗಳು ಹತ್ತಿರವಿಲ್ಲ ಎಂದು ಇದಾಗಲೇ ಪರಿಸರವಾದಿಗಳು ಎಚ್ಚರಿಕೆಯನ್ನೂ ಕೊಟ್ಟಾಗಿದೆ, ಆದರೆ ಕೇಳುವವರ್ಯಾರು?

ಪರಿಸರ ರಕ್ಷಣೆಯಲ್ಲಿ ತನ್ನದೇ ಆದ ಪ್ರಮುಖ ಪಾತ್ರ ವಹಿಸಿರುವ ಜೀವಿಗಳ ಪೈಕಿ ಪಕ್ಷಿಗಳದ್ದೂ ಬಹುದೊಡ್ಡ ಪಾಲಿದೆ. ಪ್ರತಿಯೊಂದು ಪಕ್ಷಿಯೂ ತನ್ನದೇ ಆದ ಮಿತಿಯಲ್ಲಿ ಹಾರಾಟ ಮಾಡುತ್ತವೆ. ಆದರೆ ಇದೇ ಅದಕ್ಕೆ ಮುಳುವಾಗಿದೆ. ಪ್ರಾಣಿಗಳ ಜಾಗದಲ್ಲಿ ಕಟ್ಟಡ ನಿರ್ಮಿಸಿ ಪರಿಸರ ನಾಶಕ್ಕೆ ತನ್ನದೇ ಕೊಡುಗೆ ನೀಡುತ್ತಿರುವವರು ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಿ ಪಕ್ಷಿಗಳ ಸಂತತಿ ಅಳಿವಿಗೆ ಕಾರಣವಾಗುತ್ತಿರುವುದು ವಿಷಾದನೀಯ.

ಕಟ್ಟಡಗಳಿಗೆ ಗ್ಲಾಸ್‌ಗಳನ್ನು ಅಳವಡಿಸಿದಾಗ ಅದು ಗಾಜು ಎಂದು ತಿಳಿಯದೇ ಹಾರಿ ಬರುವ ಪಕ್ಷಿಗಳು ಅವುಗಳಿಗೆ ಅಪ್ಪಳಿಸಿ ಜೀವ ಕಳೆದುಕೊಳ್ಳುತ್ತಿರುವುದು ಸರ್ವೇ ಸಾಮಾನ್ಯವಾಗಿರುವ ಈ ದಿನಗಳಲ್ಲಿ ಇದೀಗ ಅತ್ಯಂತ ಭಯಾನಕ ಎನ್ನುವ ಘಟನೆ ಜಗತ್ತಿನ ಅತಿ ಎತ್ತರದ ಕಟ್ಟಡಗಳಲ್ಲಿ ಒಂದೆನಿಸಿರುವ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್‌ನಿಂದ ಬಂದಿದೆ. ಇಲ್ಲಿ ಪ್ರತಿದಿನವೂ ಸಹಸ್ರಾರು ಪಕ್ಷಿಗಳು ಮೃತಪಡುತ್ತಿರುವ ಘಟನೆಯನ್ನು ಸಮೂಹದ ಸಂರಕ್ಷಣೆ ಮತ್ತು ವಿಜ್ಞಾನದ ಸಹಾಯಕ ನಿರ್ದೇಶಕ ಕೈಟ್ಲಿನ್ ಪಾರ್ಕಿನ್ಸ್ ಬಯಲು ಮಾಡಿದ್ದಾರೆ.

ವರ್ಲ್ಡ್ ಟ್ರೇಡ್ ಸೆಂಟರ್‌ ಬಳಿ ಪಕ್ಷಿಗಳ ಶವಗಳ ರಾಶಿಯ ಫೋಟೋ ಹಾಕಿರುವ ಅವರು, ಪಕ್ಷಿಗಳು ಇದೇ ರೀತಿ ಹಲವಾರು ಗಗನಚುಂಬಿ ಕಟ್ಟಡಗಳಿಗೆ ಸಿಲುಕಿ ಮೃತಪಡುತ್ತಿವೆ. ಆದರೆ ವರ್ಲ್ಡ್ ಟ್ರೇಡ್ ಸೆಂಟರ್‌ನ ಈ ಭಯಾನಕ ದೃಶ್ಯ ನನ್ನನ್ನು ವಿಚಲಿತನನ್ನಾಗಿ ಮಾಡಿದೆ ಎಂದಿದ್ದಾರೆ. ಚಂಡಮಾರುತ ಅಥವಾ ಬಿರುಗಾಳಿ ಉಂಟಾದಾಗ ಪಕ್ಷಿಗಳು ಏಕಾಏಕಿ ಹಾರಾಟ ನಡೆಸಿ ಪ್ರಾಣ ರಕ್ಷಿಸಿಕೊಳ್ಳಲು ಧಾವಿಸುತ್ತವೆ. ಅಂಥ ಸಂದರ್ಭಗಳಲ್ಲಿ ಇಂಥ ಗಗನ ಚುಂಬಿ ಕಟ್ಟಡಗಳ ಹೊಡೆತದಿಂದ ಮೃತಪಡುತ್ತಿವೆ ಎಂದಿದ್ದಾರೆ.

ವಸಂತ ಹಾಗೂ ಶರತ್ಕಾಲದ ಸಮಯದಲ್ಲಿನ ವಲಸೆ ಸಮಯದಲ್ಲಿ ಪಕ್ಷಿಗಳ ಅಧಿಕ ಸಾವನ್ನು ಅವರು ದಾಖಲಿಸಿದ್ದಾರೆ. ಹೊಸ ವರ್ಲ್ಡ್ ಟ್ರೇಡ್ ಸೆಂಟರ್‌ನ ಕಾಲುದಾರಿಗಳಲ್ಲಿ ಸುಮಾರು 300 ಕ್ಕೂ ಅಧಿಕ ಪಕ್ಷಿಗಳ ಮೃತದೇಹಗಳು ಕಂಡುಬಂದಿರುವುದು ನಿಜಕ್ಕೂ ಮನಸ್ಸು ಕಲಕುವಂತಿದೆ, ಎಲ್ಲೆಡೆ ಪಕ್ಷಿಗಳ ಮೃತದೇಹದವೇ ತುಂಬಿದ್ದು ನಿಜಕ್ಕೂ ಇದೊಂದು ಹೃದಯವಿದ್ರಾವಕ ಘಟನೆ ಎಂದು ಇದೇ ಸಂದರ್ಭದಲ್ಲಿ ಸ್ವಯಂಸೇವಕಿ ಮೆಲಿಸ್ಸಾ ಹೇಳಿದ್ದಾರೆ.

ಟ್ರೇಡ್ ಸೆಂಟರ್‌ನ ಮಾಲೀಕರು ಹಾಗೂ ಇತರ ಗಗನ ಚುಂಬಿ ಕಟ್ಟಡಗಳ ಮಾಲೀಕರು ರಾತ್ರಿಯಲ್ಲಿ ದೀಪಗಳನ್ನು ಕಡಿಮೆ ಮಾಡುವ ಮೂಲಕ ಪಕ್ಷಿಗಳಿಗೆ ರಾತ್ರಿವೇಳೆಯಲ್ಲಿ ಹಾರಾಡಲು ಅನುವು ಮಾಡಿಕೊಡಬೇಕೆಂದು ಅವರು ಕೇಳಿಕೊಂಡಿದ್ದಾರೆ.