ಮಗುವಿನ ಚಿತ್ರ ಸಾಂದರ್ಭಿಕ 
ನ್ಯೂಸ್

ಮಗು ಹುಟ್ಟಿದ ಸಂತಸದ ಸುದ್ದಿ ಕೇಳುವ ಮುನ್ನವೇ ಕರೊನಾಕ್ಕೆ ಬಲಿಯಾದ ತಂದೆ: ಕಲಬುರಗಿಯಲ್ಲೊಂದು ದುರಂತ ಘಟನೆ

ಕಲಬುರಗಿ: ಕರೊನಾ ಎರಡನೆಯ ಅಲೆಯ ಕರಾಳ ಮುಖ ದಿನ ದಿನಕ್ಕೂ ವಿಸ್ತಾರವಾಗುತ್ತಲೇ ಸಾಗಿದೆ. ಪಾಲಕರನ್ನು ಕಳೆದುಕೊಂಡು ತಬ್ಬಲಿಗಳಾಗುತ್ತಿರುವ ಕಂದಮ್ಮಗಳು ಒಂದೆಡೆಯಾದರೆ, ಕಣ್ಣೆದುರಿಗೇ ಮಕ್ಕಳನ್ನು, ಪತಿ/ಪತ್ನಿ, ಪಾಲಕರನ್ನು ಕಳೆದುಕೊಂಡವರ ಗೋಳು ಹೇಳತೀರದಾಗಿದೆ.

ಇದೀಗ ಅಂಥದ್ದೇ ಒಂದು ಹೃದಯವಿದ್ರಾವಕ ಘಟನೆ ಕಲಬುರಗಿಯಲ್ಲಿ ನಡೆದಿದೆ. ಒಂದೆಡೆ ತಾಯಿ ಕಂದನಿಗೆ ಜನ್ಮ ನೀಡುತ್ತಿದ್ದಂತೆಯೇ ಇತ್ತ ಆಕೆಯ ಪತಿ ಕರೊನಾಗೆ ಬಲಿಯಾಗಿರುವ ಘಟನೆ ಇದಾಗಿದೆ.

ಸುಭಾಷ್ ತಾವರಖೇಡ (32) ಕರೊನಾ ಸೊಂಕಿಗೆ ಬಲಿಯಾದವರು. ಇವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ನಿವಾಸಿ. ಕಳೆದ 15 ದಿನಗಳಿಂದ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಸುಭಾಷ್‌ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ನಿನ್ನೆ ಸಂಜೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಸುಭಾಷ್‌ ಅವರ ಪತ್ನಿ ಮಗುವಿನ ಜನ್ಮ ನೀಡಿದ್ದಾರೆ. ಮಗುವಿನ ಜನನದ ಸುದ್ದಿ ಕೇಳೊ ಮುಂಚೆಯೇ ಕರೊನಾಗೆ ತಂದೆ ಬಲಿಯಾಗಿರುವ ದುರಂತ ಘಟನೆ ಇದಾಗಿದೆ.