ಆತ್ಮಹತ್ಯೆ ಮಾಡಿಕೊಂಡ ಪತ್ನಿ, ಪುತ್ರ, ಪುತ್ರಿಯರು ಮತ್ತು ಸಾವಿಗೀಡಾದ ಮಗು ಜತೆ ಶಂಕರ್ ಇದ್ದ ಹಳೇ ಪೋಟೋ. 
ನ್ಯೂಸ್

ಪತ್ನಿ, ಮೂವರು ಮಕ್ಕಳು, ಮೊಮ್ಮಗುವಿನ ಸಾವಿಗೆ ಕಾರಣವಾದ್ರಾ ಈ ಸಂಪಾದಕ? ಡೆತ್‌ನೋಟ್‌ನಲ್ಲಿ ಸಿಕ್ಕಿವೆ ಮಹತ್ವದ ಸುಳಿವು!

suchetana

ಬೆಂಗಳೂರು: ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಕಳೆದ ಶುಕ್ರವಾರ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.

ಭಾರತಿ (50), ಸಿಂಚನ (32), ಸಿಂಧೂರಾಣಿ (30), ಮಧುಸಾಗರ್​ (26) ಮತ್ತು 9 ತಿಂಗಳ ಮಗುವಿನ ಶವ ಪತ್ತೆಯಾಗಿತ್ತು. ಮಗುವನ್ನು ಮೊದಲು ಕೊಂದು ನಂತರ ಉಳಿದವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪತ್ರಿಕೆಯೊಂದರ ಸಂಪಾದಕ ಶಂಕರ್ ಎನ್ನುವವರಿಗೆ ಸೇರಿರುವ ಕುಟುಂಬ ಇದಾಗಿದೆ. ಎಲ್ಲರೂ ಸಾಯುತ್ತಿದ್ದಂತೆಯೇ ಶಂಕರ್‌ ಅವರು ದೂರು ದಾಖಲು ಮಾಡಿದ್ದರು. ಅದರಲ್ಲಿ ಅವರು ತಮ್ಮ ಪತ್ನಿ ಭಾರತಿ (ಆತ್ಮಹತ್ಯೆ ಮಾಡಿಕೊಂಡವರಲ್ಲಿ ಒಬ್ಬರು) ತಪ್ಪಿನಿಂದಲೇ ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದರು. ಶಂಕರ್​ ಈ ಹಿಂದಿನಿಂದಲೂ ಪತ್ನಿ ಮತ್ತು ಮಗನ ಜತೆ ಭಿನ್ನಾಭಿಪ್ರಾಯ ಹೊಂದಿದ್ದರು.

ಹೆಂಡತಿ‌ ಜತೆಗೆ ಹೆಣ್ಣುಮಕ್ಕಳ ವಿಚಾರವಾಗಿ ಭಿನ್ನಾಭಿಪ್ರಾಯ ಹೊಂದಿದ್ದರು. ಗಂಡನ ಮನೆ ಬಿಟ್ಟು ಬಂದಿದ್ದ ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳುಹಿಸುವಂತೆ ಶಂಕರ್ ಒತ್ತಾಯಿಸಿದ್ದರು. ಆದರೆ, ಕಳಿಸುವುದಿಲ್ಲ ಎಂದು ಶಂಕರ್ ಜತೆ ಪತ್ನಿ ಭಾರತಿ ಜಗಳಕ್ಕಿಳಿದಿದ್ದರು. ಆದ್ದರಿಂದ ಪತ್ನಿಯೇ ಈ ಸಾವಿಗೆ ಕಾರಣ ಎಂಬ ಅರ್ಥದಲ್ಲಿ ಮಾಹಿತಿ ನೀಡಿದ್ದರು.

ಆದರೆ ಇದೀಗ ಸ್ಥಳದಲ್ಲಿ ಸಿಕ್ಕ ಡೆತ್‌ನೋಟ್‌ ಹೇಳುತ್ತಿರುವುದೇ ಬೇರೆ. ಮಹಜರು ವೇಳೆ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ದೃಷ್ಟಿಯಿಂದ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ಪೊಲೀಸರು ಮನೆಗೆ ಬೀಗ ಹಾಕಿದ್ದರು. ನಿನ್ನೆ ಮರಣೋತ್ತರ ಪರೀಕ್ಷೆಯ ನಂತರ ಮೃತರ ಅಂತ್ಯಕ್ರಿಯೆ ಮುಗಿದ ನಂತರ ಮಹಜರು ಮಾಡಿದಾಗ ಅಲ್ಲಿ ನಾಲ್ಕು ಫೋನ್, 3 ಲ್ಯಾಪ್ ಟಾಪ್ ಹಾಗೂ ಕೆಲ ದಾಖಲೆಗಳು, ಮಹಜರು ವೇಳೆ ಮನೆಯಲ್ಲಿ ಸುಮಾರು ಒಂದು ಕೆ.ಜಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. 10-12 ಲಕ್ಷ ನಗದು ಕೂಡ ಸಿಕ್ಕಿವೆ, ಇವುಗಳ ಜತೆ ಡೆತ್‌ನೋಟ್‌ ಕೂಡ ಸಿಕ್ಕಿದೆ.

ಅದರಲ್ಲಿ ಇಬ್ಬರು ಹೆಣ್ಣುಮಕ್ಕಳಾದ ಸಿಂಚನಾ ಮತ್ತು ಸಿಂಧೂರಾಣಿ ಬರೆದಿರುವ 3-4 ಪುಟಗಳ ಸುದೀರ್ಘ ಡೆತ್​ನೋಟ್ ಬಹು ಮಹತ್ವದ ತಿರುವು ಪಡೆದುಕೊಂಡಿದೆ. ಅದೇನೆಂದರೆ ಗಂಡನ ಮನೆ ತೊರೆದು ಬಂದಿದ್ದ ಇವರಿಬ್ಬರೂ ತಮ್ಮ ತಂದೆ ಶಂಕರ್ ವಿರುದ್ಧ ಆರೋಪ ಮಾಡಿದ್ದಾರೆ. ಜತೆಗೆ ಗಂಡನ ಮನೆ ಬಗ್ಗೆಯೂ ಬರೆದಿದ್ದಾರೆ.

''ತವರು ಮನೆಯಲ್ಲಿ ನಮ್ಮನ್ನು ನಮ್ಮ ತಂದೆ ಸರಿಯಾಗಿ ನೋಡಿಕೊಳ್ಳಲಿಲ್ಲ. ಯಾವಾಗಲೂ ಗಂಡನ ಮನೆಗೆ ಹೋಗಿ ಎಂದು ಒತ್ತಾಯಿಸುತ್ತಿದ್ದರು. ಆದರೆ ನಮಗೆ ಗಂಡನ ಮನೆಯಲ್ಲೂ ಸರಿಯಾಗಿ ನೆಮ್ಮದಿ ಇರಲಿಲ್ಲ. ಎರಡು ಕಡೆ ನೆಮ್ಮದಿ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ'' ಎಂದು ಬರೆದಿದ್ದಾರೆ. ಅದರಲ್ಲಿ ಪರೋಕ್ಷವಾಗಿ ತಂದೆಯೇ ಆತ್ಮಹತ್ಯೆಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ ಆ ಇಬ್ಬರು ಹೆಣ್ಣುಮಕ್ಕಳು ತಮ್ಮ ಗಂಡಂದಿರ ಬಗ್ಗೆಯೂ ಆರೋಪ ಮಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಶಂಕರ್‌ ಅವರ ಮಗ ಮಧುಸಾಗರ್ ಕೂಡ ತಂದೆಯ ಬಗ್ಗೆಯೇ ಹೆಚ್ಚು ಆರೋಪ ಮಾಡಿದ್ದಾರೆ. ಹೀಗಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ಶಂಕರ್ ವಿರುದ್ಧವೇ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.

ಇದಕ್ಕೆ ಇಂಬು ಕೊಡಲು ಎಂಬಂತೆ, ಮನೆಯಲ್ಲಿ ಅಷ್ಟೊಂದು ಹೆಣಗಳ ರಾಶಿ ಬಿದ್ದಿದ್ದರೂ ಶಂಕರ್‌ಗೆ ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ವ್ಯಾಮೋಹ ತೋರುತ್ತಿದ್ದರು. ಮನೆಯಲ್ಲಿ ಹಣ, ಚಿನ್ನಾಭರಣವಿದೆ. ಹೀಗಾಗಿ ನನ್ನ ಮತ್ತು ನನ್ನ ಆಪ್ತರ ಮುಂದೆ ಸ್ಥಳ ಮಹಜರು ಮಾಡಿ ಅಂತಾ ಶಂಕರ್ ಮನವಿ ಮಾಡಿದ್ದರಿಂದ ಆಗಲೇ ಅವರ ಮೇಲೆ ಪೊಲೀಸರಿಗೆ ಅನುಮಾನ ಹೆಚ್ಚಾಗಿತ್ತು.