ಮುಂಬೈ: ಕಿರುತೆರೆ, ಒಟಿಟಿ ಮತ್ತು ಸಿನಿಮಾ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ಮಾಪಕಿ ಮತ್ತು ನಿರ್ದೇಶಕಿ ಏಕ್ತಾ ಕಪೂರ್ ಮತ್ತು ಅವರ ತಾಯಿ ಶೋಭಾ ಕಪೂರ್ಗೆ ಈಗ ಬಂಧನದ ಭೀತಿ ಎದುರಾಗಿದೆ. 'XXX' ವೆಬ್ ಸರಣಿಯ ಎರಡನೇ ಸೀಸನ್‍ನಲ್ಲಿ ಹಲವಾರು ದೃಶ್ಯಗಳಲ್ಲಿ ಸೈನಿಕರನ್ನು ಮತ್ತು ಅವರ ಕುಟುಂಬದವರನ್ನು ಅವಮಾನಿಸಿದ್ದಾರೆ ಎನ್ನುವ ಕಾರಣಕ್ಕೆ ಇವರ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ.
ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್ ಒಡೆತನದ ಒಟಿಟಿ ಪ್ಲಾಟ್‍ಫಾರ್ಮ್ ಎಎಲ್‍ಟಿ ಬಾಲಾಜಿಯಲ್ಲಿ ಈ ಸರಣಿಯನ್ನು ಪ್ರಸಾರ ಮಾಡಲಾಗಿದೆ.
'XXX' ವೆಬ್ ಸರಣಿ ಸೀಸನ್-2ನಲ್ಲಿ ಸೈನಿಕರಿಗೆ ಅವಮಾನಿಸಿದ್ದಕ್ಕೆ ಮಾಜಿ ಸೈನಿಕ ಶಂಭುಕುಮಾರ್ ಅವರು ದೂರು ನೀಡಿದ್ದರು. ಸೈನಿಕರು ಮತ್ತು ಅವರ ಕುಟುಂಬಕ್ಕೆ ನೋವಾಗಿದೆ. ಸರಿಯಾದ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಹಾರದ ಬೇಗುಸರಾಯ್ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ಈ ಸರಣಿಯಲ್ಲಿ ಸೈನಿಕನ ಪತ್ನಿಗೆ ಸಂಬಂಧಿಸಿದ ಆಕ್ಷೇಪಾರ್ಹ ದೃಶ್ಯಗಳಿವೆ, ಮಾತ್ರವಲ್ಲದೇ ಈ ಸರಣಿ ಸೈನಿಕರ ವಿರುದ್ಧವೇ ಮಾಡಿದ್ದಾರೆ ಶಂಭುಕುಮಾರ್ ಆಕ್ಷೇಪಿಸಿದ್ದಾರೆ.
ಈ ಮೊದಲು ವಿಚಾರಣೆ ನಡೆಸಿದ್ದ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಆಗ ವಕೀಲರನ್ನು ನೇಮಕ ಮಾಡಿಕೊಂಡಿದ್ದ ತಾಯಿ-ಮಗಳು ಆ ಮೂಲಕ ಕೋರ್ಟ್ಗೆ ಸಮಜಾಯಿಷಿ ನೀಡಿದ್ದರು. ಆಕ್ಷೇಪಣೆಯ ನಂತರ ಸರಣಿಯಲ್ಲಿನ ಕೆಲವು ದೃಶ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಅವರ ಪರ ವಕೀಲ ಹೃಷಿಕೇಶ್ ಪಾಠಕ್ ಕೋರ್ಟ್ ಗಮನಕ್ಕೆ ತಂದರು. ಅದರೆ ನ್ಯಾಯಾಧೀಶ ವಿಕಾಸ್ ಕುಮಾರ್ ಅದನ್ನು ಮಾನ್ಯ ಮಾಡಲಿಲ್ಲ. ವಾರೆಂಟ್ ಜಾರಿಗೊಳಿಸಿ ಆದೇಶಿಸಿದರು.
ಅಂದಹಾಗೆ, ‘ಎಕ್ಸ್ ಎಕ್ಸ್ ಎಕ್ಸ್’ ವೆಬ್ ಸೀರಿಸ್ನ ಮೊದಲ ಸೀಸನ್ 2018ರಲ್ಲಿ ಪ್ರಸಾರವಾಗಿತ್ತು. 2020ರ ಜನವರಿಯಲ್ಲಿ ಎರಡನೇ ಸೀಸನ್ ಬಿಡುಗಡೆ ಆಯಿತು. ಇದರ ಪ್ರತಿ ಎಪಿಸೋಡ್ಗಳಲ್ಲಿ ಬೇರೆ ಬೇರೆ ಕಥೆ ಇದೆ. ಲೈಂಗಿಕ ಸಂಬಂಧಗಳ ವಿವಿಧ ಆಯಾಮಗಳನ್ನು ಇಟ್ಟುಕೊಂಡು ಈ ಸಂಚಿಕೆಗಳು ಮೂಡಿಬಂದಿವೆ. ಇದರಲ್ಲಿ ಸೈನಿಕರ ಕುಟುಂಬಕ್ಕೆ ಹಾಗೂ ಪತ್ನಿಯರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. (ಏಜೆನ್ಸೀಸ್)