ನ್ಯೂಸ್

ಎಲ್ಲೆಡೆ ಹರಡುತ್ತಿದೆ ಮಂಕಿಪಾಕ್ಸ್​: ಲೈಂಗಿಕ ಕ್ರಿಯೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಈ ಎಚ್ಚರಿಕೆ...

ನವದೆಹಲಿ: ಮಂಕಿಪಾಕ್ಸ್​ ಇದಾಗಲೇ ಭಾರತಕ್ಕೂ ಕಾಲಿಟ್ಟು, ಕೆಲವು ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇದಾಗಲೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ಭೀತಿಯ ವಾತಾವರಣವನ್ನು ಇದು ಸೃಷ್ಟಿಸಿರುವ ಬೆನ್ನಲ್ಲೇ ಈ ವೈರಸ್​ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಸಾಕಷ್ಟು ಅಧ್ಯಯನ ನಡೆಸುತ್ತಿದೆ.

ಇದೀಗ ಲೈಂಗಿಕ ಕ್ರಿಯೆ, ಅದರಲ್ಲಿಯೂ ಪುರುಷರ ಲೈಂಗಿಕ ಕ್ರಿಯೆ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯೊಂದನ್ನು ನೀಡಿದೆ. ಅದೇನೆಂದರೆ, ಲೈಂಗಿಕ ಸಂಬಂಧ ಹೊಂದುವ ಸಂಗಾತಿ ಸಂಖ್ಯೆ ಮಿತಿಗೊಳಿಸಲು ಅದು ಸೂಚನೆ ನೀಡಿದೆ. ಕಾನೂನು ಬದ್ಧವಾಗಿ ಒಂದೇ ಸಂಗಾತಿ ಇದ್ದರೂ ಅಕ್ರಮ ಸಂಬಂಧ ಹೊಂದುತ್ತಿರುವವರ ಸಂಖ್ಯೆ ಭಾರತಕ್ಕೂ ಈಗೇನು ಹೊಸದಾಗಿ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ, ಮಂಕಿಪಾಕ್ಸ್​ ಕುರಿತು ಎಚ್ಚರಿಕೆ ನೀಡಿರುವ ಆರೋಗ್ಯ ಸಂಸ್ಥೆ, ಸಂಗಾತಿ ಸಂಖ್ಯೆ ಮಿತಿಗೊಳಿಸಿ, ಇಲ್ಲವೇ ಮಂಕಿಪಾಕ್ಸ್​ ಹರಡುವ ಸಾಧ್ಯತೆ ಇದೆ ಎಂದು ಹೇಳಿದೆ.

ಇದಕ್ಕೆ ಕಾರಣ, ಮಂಕಿಪಾಕ್ಸ್​ ಕಾಣಿಸಿಕೊಂಡಿರುವ ವ್ಯಕ್ತಿಗಳನ್ನು ಇದಾಗಲೇ ಒಳಪಡಿಸಲಾಗಿದ್ದು, ಅವರ ಪೈಕಿ ಹೆಚ್ಚಿನವರು ಅತಿ ಹೆಚ್ಚಿನ ರೀತಿಯಲ್ಲಿ ಲೈಂಗಿಕ ಸಂಪರ್ಕ ಹೊಂದಿರುವವರು ಆಗಿದ್ದಾರೆ ಎನ್ನಲಾಗಿದೆ. ಅದರಲ್ಲಿಯೂ ಪುರುಷರು ಪರಪುರಷರ ಜತೆ ಲೈಂಗಿಕ ಸಂಬಂಧ ಹೊಂದುತ್ತಿರುವವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಕಳೆದ ಶನಿವಾರ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಘೋಷಣೆ ಮಾಡಿದ್ದರು.

ಇದರ ಬೆನ್ನಲ್ಲೇ ಇದೀಗ ಪುರುಷರೊಂದಿಗೆ ಸಂಭೋಗಿಸುವ ಪುರುಷರಿಗೆ ವಿಶೇಷವಾಗಿ ಸಲಹೆ ನೀಡಲಾಗಿದ್ದು ಲೈಂಗಿಕ ಸಂಗಾತಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ಹೊಸ ಸಂಗಾತಿ ಲೈಂಗಿಕತೆ ಹೊಂದುವ ಮೊದಲು ಮರುಪರಿಶೀಲಿಸುವುದು, ಅಗತ್ಯವಿದ್ದರೆ ಹೊಸ ಸಂಗಾತಿ ಸಂಪರ್ಕ ವಿವರಗಳನ್ನು ವಿನಿಮಯ ಮಾಡಿಕೊಳ್ಳಿ ಎಂದು ಸಲಹೆ ನೀಡಿದೆ.

ಮಂಕಿಪಾಕ್ಸ್ ಸೋಂಕಿನ ಉಲ್ಬಣವು ಮೇ ತಿಂಗಳ ಆರಂಭದಲ್ಲಿ ಪಶ್ಚಿಮ ಮತ್ತು ಮಧ್ಯ ಆಫ್ರಿಕಾದ ದೇಶಗಳ ಹೊರಗೆ ವರದಿಯಾಗಿದೆ. 78 ದೇಶಗಳಲ್ಲಿ ಈಗ 18 ಸಾವಿರಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಎಂದು ಟೆಡ್ರೊಸ್ ಹೇಳಿದ್ದಾರೆ. ಯುರೋಪ್‌ನಲ್ಲಿ 70% ಪ್ರಕರಣಗಳು ಮತ್ತು ಅಮೆರಿಕದಲ್ಲಿ 25 ಪ್ರತಿಶತ ಪ್ರಕರಣಗಳು ವರದಿಯಾಗಿವೆ. (ಏಜೆನ್ಸೀಸ್​)