ನ್ಯೂಸ್

‘ತೆಳ್ಳಗಿನ ನನ್ನ ದೇಹ ನೋಡಿ ನಕ್ಕವರು ಅಷ್ಟಿಷ್ಟಲ್ಲ, ಬಾಡಿ ಶೇಮಿಂಗ್‌ನಿಂದ ಖಿನ್ನತೆಗೂ ಜಾರಿದ್ದೆ’ ಎಂದ ನಟಿ ಆಥಿಯಾ

ಮುಂಬೈ: ದಪ್ಪಗಿದ್ದರೂ ಕಷ್ಟ, ತೆಳ್ಳಗಿದ್ದರೆ ಮತ್ತಷ್ಟು ಸಂಕಷ್ಟ ಎಂದು ಹೇಳುವ ಮೂಲಕ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ, ನಟಿ ಆಥಿಯಾ ಶೆಟ್ಟಿ ತಾವು ಅನುಭವಿಸಿರುವ ನೋವಿನ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ಇತ್ತೀಚೆಗಷ್ಟೇ ಭುವನ ಸುಂದರಿಯಾಗಿ ಆಯ್ಕೆಯಾಗಿರುವ ಭಾರತದ ಹರ್ನಾಜ್ ಸಂಧು ತಾವು ತೆಳ್ಳಗಿದ್ದರಿಂದ ಚಿಕ್ಕಂದಿನಲ್ಲಿ ಅನುಭವಿಸಿದ್ದ ಹಿಂಸೆಯ ಬಗ್ಗೆ ಮಾತನಾಡಿದ್ದರು. ಅದೇ ಮಾತನ್ನೀಗ ಆಥಿಯಾ ಶೆಟ್ಟಿಯೂ ವಿವರಿಸಿದ್ದು, ತಾವು ತೆಳ್ಳಗಿದ್ದ ಕಾರಣ, ಹೇಗೆಲ್ಲಾ ಜನ ಆಡಿಕೊಂಡರು, ಯಾವ ರೀತಿಯಲ್ಲಿ ಬಾಡಿ ಶೇಮಿಂಗ್‌ ಮಾಡಿದರು ಎಂಬ ಬಗ್ಗೆ ವಿವರಣೆ ನೀಡಿದ್ದಾರೆ.

‘ದಪ್ಪಗಿದ್ದರೆ ಮಾತ್ರ ಅಪಹಾಸ್ಯ ಮಾಡುತ್ತಾರೆ ಎಂಬ ಕಲ್ಪನೆ ಜನರಿಗಿದೆ. ಆದರೆ ಇದು ತಪ್ಪು. ಜಡಿದರೆ ಹಲವು ವಿಧದ ಬಾಡಿ ಶೇಮಿಂಗ್​ಗಳಿವೆ. ನಾನು ತೆಳ್ಳಗಿದ್ದ ಕಾರಣ ಅನುಭವಿಸಿದ ಹಿಂಸೆ, ಮಾನಸಿಕ ಯಾತನೆ ಅಷ್ಟಿಷ್ಟಲ್ಲ’ ಎಂದು ಆಥಿಯಾ ಹೇಳಿದ್ದಾರೆ. ಮತ್ತೊಬ್ಬರ ತೂಕ, ನೋಟ, ಕೆಲಸಗಳಿಗೆ ಕಾಮೆಂಟ್ ಮಾಡುವುದು ಒಳ್ಳೆಯದಲ್ಲ. ಆದರೂ ಜನರು ಹೀಯಾಳಿಸುವುದು ಬಿಡುವುದಿಲ್ಲ ಎಂದು ಅವರು ದುಃಖ ತೋಡಿಕೊಂಡಿದ್ದಾರೆ.

ನಾನು ತೀರಾ ತೆಳ್ಳಗಿದ್ದೆ. ಆದ್ದರಿಂದ ಬಾಡಿ ಶೇಮಿಂಗ್‌ ಎದುರಿಸುತ್ತಲೇ ಇದ್ದೆ. ಆದರೆ ಆತ್ಮವಿಶ್ವಾಸವನ್ನು ಕುಗ್ಗಿಸಿಕೊಳ್ಳುವ ವ್ಯಕ್ತಿ ನಾನಲ್ಲ. ಎಲ್ಲರ ಮಾತನ್ನೂ ಆಲಿಸುತ್ತಲೇ ಇದ್ದೆ. ಮಾನಸಿಕವಾಗಿಯೂ ಆರಂಭದಲ್ಲಿ ಕುಗ್ಗಿದ್ದೆ ಆದರೆ ಇದರಿಂದ ಏನೂ ಪ್ರಯೋಜನವಿಲ್ಲ ಎನ್ನಿಸಿತು. ಬಾಲ್ಯದಲ್ಲಿ ಇಂತಹ ಟೀಕೆಗಳಿಂದ ಬೇಸತ್ತು ನಾನು ನನ್ನ ದೇಹದ ಬಗ್ಗೆ ಬಹಳ ಜಾಗರೂಕಳಾಗಿದ್ದೆ. ಈಗಲೂ ಹಾಗೆಯೇ ಇದ್ದೇನೆ. ಜನರ ಮಾತುಗಳನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ಎಲ್ಲವನ್ನೂ ಆತ್ಮವಿಶ್ವಾಸದಿಂದ ಎದುರಿಸಿದೆ. ಈಗ ಇನ್ನಷ್ಟು ಆತ್ಮವಿಶ್ವಾಸ ಹೊಂದಿದ್ದೇನೆ’ ಎಂದರು.

‘ಒಬ್ಬೊಬ್ಬರ ದೇಹದ ಸ್ವರೂಪ ಒಂದೊಂದು ರೀತಿಯದ್ದಾಗಿರುತ್ತದೆ. ಅವರ ಬಗ್ಗೆ ಒಳ್ಳೆಯದು ಹೇಳಲು ಸಾಧ್ಯವಾದರೆ ಹೇಳಿ. ಅದು ಸಾಧ್ಯವಾಗುವುದಿಲ್ಲವೇ ನಕಾರಾತ್ಮಕವಾದ ಮಾತನ್ನಾಡಿ ಚುಚ್ಚಬೇಡಿ. ಅದು ಅವರ ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತದೆ’ ಎಂದು ಆಥಿಯಾ ತಿಳಿಸಿದ್ದಾರೆ.

ಎಲ್ಲರೂ ಅಪರಿಪೂರ್ಣರು. ಆದರೆ ಅಪರಿಪೂರ್ಣವಾಗಿರುವುದೇ ಪರಿಪೂರ್ಣತೆ. ಎಲ್ಲರೂ ಒಂದೇ ರೀತಿ ಕಾಣುವುದಿಲ್ಲ ಮತ್ತು ಹಾಗಿರಲು ಸಾಧ್ಯವೂ ಇಲ್ಲ. ಆದ್ದರಿಂದ ಇದ್ದಂತೆ ಎಲ್ಲವನ್ನೂ ಸ್ವೀಕರಿಸಿ ಎಂದು ಆಥಿಯಾ ಇದೇ ಸಂದರ್ಭದಲ್ಲಿ ಬಾಡಿಶೇಮಿಂಗ್‌ಗೆ ಒಳಗಾಗುವವರಿಗೆ ಕಿವಿಮಾತು ಹೇಳಿದ್ದಾರೆ.

ಬಾಡಿ ಶೇಮಿಂಗ್​ಗೆ ಚಲನಚಿತ್ರಗಳು, ಮಾಧ್ಯಮಗಳು ಕೂಡ ಕಾರಣವೇ. ಇವುಗಳಲ್ಲಿನ ಸೆಲೆಬ್ರಿಟಿಗಳನ್ನು ನೋಡಿ ಎಲ್ಲರೂ ಅವರಂತಾಗಲು ಬಯಸುತ್ತಾರೆ. ಆದರೆ ನಿಜ ಜೀವನ ಹಾಗಿರುವುದಿಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಂಡಿರುವುದಿಲ್ಲ ಎಂದಿದ್ದಾರೆ. ಅಂದಹಾಗೆ, 2019ರಿಂದ ಆಥಿಯಾ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಇದಕ್ಕೆ ನಿಖರ ಕಾರಣವನ್ನೂ ಕೊಟ್ಟಿಲ್ಲ.