ನ್ಯೂಸ್

ಲಾರಿ, ಬಸ್‌ ನಡುವೆ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: 14 ಮಂದಿ ದುರ್ಮರಣ- ಕೆಲವರ ಸ್ಥಿತಿ ಚಿಂತಾಜನಕ

ಕರ್ನೂಲ್‌ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ವೆಲ್ದುರ್ಥಿ ಬಳಿಯ ಮಾದಾಪುರ ಸಮೀಪ ಈ ಘಟನೆ ನಡೆದಿದೆ. ಅಪಘಾತದಲ್ಲಿ ಹದಿನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಿತ್ತೂರು ಜಿಲ್ಲೆಯ ಮದನಪಲ್ಲೆಯಿಂದ ಅಜ್ಮೀರ್ ದರ್ಗಾಕ್ಕೆ ಬಸ್ ಪ್ರಯಾಣಿಸುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ.

ಮೃತಪಟ್ಟವರಲ್ಲಿ ಮಗು ಸೇರಿದಂತೆ ಎಂಟು ಮಹಿಳೆಯರು ಸೇರಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ.

ಮಿನಿ ಬಸ್‌ನಲ್ಲಿ ಒಟ್ಟು 18 ಪ್ರಯಾಣಿಕರಿದ್ದರು. 14 ಜನರು ಮೃತಪಟ್ಟಿದ್ದು ಮತ್ತು ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಕುರಿತಂತೆ ಇನ್ನೂ ಹೆಚ್ಚಿನ ವರದಿ ನಿರೀಕ್ಷಿಸಲಾಗುತ್ತಿದೆ.