ನವದೆಹಲಿ: 2020 ಎಂದರೆ ಎಲ್ಲರೂ ಭಯಬೀಳುವ ವರ್ಷವೇ ಆಗಿ ಹೋಗಿದೆ. ವರ್ಷದ ಆರಂಭದಿಂದ ಹಿಡಿದು ಅಂತ್ಯದವರೆಗೂ ಕರೊನಾ ಭೀತಿಯಿಂದ ಇಡೀ ಜಗತ್ತೇ ಕಂಗಾಲಾಗಿ ಹೋಗಿದ್ದು, ಭೀತಿ ಇನ್ನೂ ಮುಂದುವರೆದಿದೆ.
ಕರೊನಾ, ಲಾಕ್ಡೌನ್ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದೊಂದು ಚಿತ್ರ-ವಿಚಿತ್ರ ಘಟನೆಗಳು ನಡೆದಿವೆ, ಎಷ್ಟೋ ಮಂದಿಯ ಜೀವನದಲ್ಲಿ ಕುತೂಹಲದ ತಿರುವುಗಳೂ ಆಗಿವೆ, ಆಗರ್ಭ ಸಿರಿವಂತ ಪಾತಾಳಕ್ಕಿಳಿದಿರುವ ಉದಾಹರಣೆಗಳೂ ಇವೆ.
ಒಟ್ಟಿನಲ್ಲಿ ಈ ವರ್ಷ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷ ಒಂದು ದಾಖಲೆಯನ್ನೇ ಬರೆದುಬಿಟ್ಟಿದ್ದಾರೆ. ಅದೇನು ಗೊತ್ತಾ?
ಸಾಮಾನ್ಯವಾಗಿ ಪ್ರಧಾನಿ ಮೋದಿ ಎಂದರೆ ವಿದೇಶ ಪ್ರವಾಸ ಎಂದೇ ನೆನಪಾಗುತ್ತದೆ. 2014ರಿಂದ ಎರಡನೇ ಅಧಿಕಾರಾವಧಿಯ ನವೆಂಬರ್ 2019ರ ತನಕ 96 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಮೋದಿ. ಈ ಪ್ರವಾಸದಿಂದಲೇ ಎಷ್ಟೋ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ಸಾರ್ವಜನಿಕರ ಹಣವನ್ನು ತಮ್ಮ ವಿದೇಶ ಪ್ರವಾಸಕ್ಕಾಗಿ ಪೋಲು ಮಾಡುತ್ತಿದ್ದಾರೆ ಎಂದು ಸುದ್ದಿ ಹರಡಿಸಿದವರೂ ಇದ್ದಾರೆ. ಆದರೆ ಅದೇ ಇನ್ನೊಂದೆಡೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಭಾರತದಲ್ಲಿ ಆಗುತ್ತಿರುವ ಅಭಿವೃದ್ಧಿಗೆ ಈ ವಿದೇಶ ಪ್ರವಾಸವೇ ಕಾರಣ ಎನ್ನುವವರೂ ಇದ್ದಾರೆ.
ನೆರೆಹೊರೆಯ ದೇಶಗಳ ಪ್ರಧಾನಿ, ಅಧ್ಯಕ್ಷರು ಇಂದು ಭಾರತದತ್ತ ಮುಖಮಾಡುತ್ತಿದ್ದರೆ, ವಿದೇಶಗಳಲ್ಲಿನ ಎಷ್ಟೋ ಬೃಹತ್ ಉದ್ಯಮಗಳು ಭಾರತದಲ್ಲಿ ಸ್ಥಾಪನೆಗೆ ಒಲವು ತೋರಿದ್ದರೆ, ಭಾರತ ಎಂದರೆ ಅಸಡ್ಡೆಯಿಂದ ನೋಡುತ್ತಿದ್ದ ಹಲವು ರಾಷ್ಟ್ರಗಳು ಇಂದು ಇಲ್ಲಿಯ ಬೆಳವಣಿಗೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಿರುವ ಹಿಂದಿರುವುದು ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸವೇ ಎನ್ನಲಾಗುತ್ತಿದೆ.
ಅದೇನೇ ಇದ್ದರೂ, 2020ರಲ್ಲಿ ಪ್ರಧಾನಿ ಮೋದಿಯವರು ಒಂದೇ ಒಂದು ವಿದೇಶ ಪ್ರವಾಸ ಕೈಗೊಳ್ಳದೇ ದಾಖಲೆ ನಿರ್ಮಿಸಿದ್ದಾರೆ. ಇವರು ಕೊನೆಯ ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದು ನವೆಂಬರ್ 2019ರಲ್ಲಿ. ಆಗ ಅವರು ಬ್ರೆಜಿಲ್ಗೆ ಭೇಟಿ ನೀಡಿದ್ದರು. 2019ರ ಡಿಸೆಂಬರ್ ಬಳಿಕ ಮೋದಿ ಯಾವುದೇ ವಿದೇಶ ಪ್ರವಾಸ ಕೈಗೊಂಡಿಲ್ಲ. ವರ್ಷ ಮುಗಿಯಲು ಒಂದೇ ತಿಂಗಳು ಬಾಕಿ ಇದ್ದು, ಸದ್ಯದವರೆಗೆ ಡಿಸೆಂಬರ್ನಲ್ಲಿ ಕೂಡ ಯಾವುದೇ ವಿದೇಶ ಪ್ರವಾಸ ನಿಗದಿಯಾಗಿಲ್ಲ, ಈ ಮೂಲಕ 2020 ಪ್ರವಾಸವಿಲ್ಲದ ವರ್ಷವಾಗಿರಲಿದೆ.
ಇನ್ನು ಪ್ರಧಾನಿಯಾಗಿ ಮೋದಿಯವರು ಅಧಿಕಾರ ಸ್ವೀಕರಿಸಿದ ವರ್ಷದಿಂದ ಹೇಳುವುದಾದರೆ, ಅಧಿಕಾರ ಸ್ವೀಕರಿಸಿದ್ದ ಮೊದಲ ವರ್ಷವಾದ 2014ರಲ್ಲಿ 8 ದೇಶ, 2015ರಲ್ಲಿ 23 ದೇಶ, 2016ರಲ್ಲಿ 17, 2017, 2018 ಮತ್ತು 2019ರಲ್ಲಿ ಕ್ರಮವಾಗಿ 14, 20 ಹಾಗೂ 14 ದೇಶಗಳಿಗೆ ಭೇಟಿ ನೀಡಿದ್ದಾರೆ.