ಕಮಲದತ್ತ ಮುಖ ಮಾಡಿದ ಕಾಂಗ್ರೆಸ್​ ಸ್ಟಾರ್​ ಪ್ರಚಾರಕಿ ನಟಿ- ನಾಳೆ ಮುಹೂರ್ತ ಫಿಕ್ಸ್​?

vijayashanthi
Published on

ನವದೆಹಲಿ: ಕಾಂಗ್ರೆಸ್​ನ ಕೆಲವು ಸಿದ್ಧಾಂತಗಳಿಗೆ ಬೇಸತ್ತು ಈಚೆಗಷ್ಟೇ ನಟಿ ಖುಷ್ಬೂ ಸುಂದರ್​ ಬಿಜೆಪಿಯನ್ನು ಸೇರಿರುವ ಬೆನ್ನಲ್ಲೇ ಇದೀಗ ಮತ್ತೋರ್ವ ಪ್ರಸಿದ್ಧ ನಟಿ, ಮಾಜಿ ಸಂಸದೆ ವಿಜಯಶಾಂತಿ ಅವರು ಬಿಜೆಪಿ ಸೇರ್ಪಡೆಗೊಳ್ಳುವುದು ಖಚಿತವಾಗಿದ್ದು, ನಾಳೆ ಮುಹೂರ್ತ ಫಿಕ್ಸ್​ ಆಗಿದೆ ಎನ್ನಲಾಗಿದೆ.

ಕಾಂಗ್ರೆಸ್​ನ ಸಂಸದೆಯಾಗಿದ್ದ ವಿಜಯಶಾಂತಿ, ಕಾಂಗ್ರೆಸ್​ನ ಸ್ಟಾರ್ ಪ್ರಚಾರಕಿ ಎಂದೇ ಗುರುತಿಸಿಕೊಂಡವರು. ಇವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಕೆಲವು ತಿಂಗಳಿನಿಂದ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಇದು ಬಹುತೇಕ ಖಚಿತವಾಗಿದ್ದು, ನಾಳೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಮೂಲಗಳು ಹೇಳಿವೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್​ನ (ಜಿಎಚ್​ಎಂಸಿ) 150 ವಾರ್ಡ್​ಗಳಿಗೆ ಬರುವ ಡಿಸೆಂಬರ್​ 1ರಿಂದ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿಯೇ ವಿಜಯಶಾಂತಿಯವರು ಬಿಜೆಪಿ ಸೇರುವ ಮೂಲಕ ಪಕ್ಷದ ಪ್ರಚಾರಕ್ಕೆ ಆನೆಬಲ ಬಂದಂತಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ವಿಜಯಶಾಂತಿ ಅವರಿಗೆ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ. 80 ಹಾಗೂ 90ರ ದಶಕದಲ್ಲಿ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಮಿಂಚಿದ್ದ ವಿಜಯ ಶಾಂತಿ ಧೀರ್ಘಕಾಲದ ವಿರಾಮದ ಬಳಿಕ ಮಹೇಶ್ ಬಾಬು ಅವರ ಸರಿಲೇರು ನೀಕೇವರ 'ಚಿತ್ರದ ಮೂಲಕ ಮತ್ತೆ ಟಾಲಿವುಡ್​ಗೆ ರೀ ಎಂಟ್ರಿ ಕೊಟ್ಟಿದ್ದಾರೆ.

ಈ ನಡುವೆಯೇ ಕೊಪ್ಪಳದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಮಾತನಾಡಿದ್ದು, ಅನೇಕ ಬಿಜೆಪಿಗರು ಕಾಂಗ್ರೆಸ್​ ಸೇರುವ ದಿನ ದೂರವಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net