ನ್ಯೂಸ್

ಕೆನ್ನೆಗೆ ಹೊಡೆಯುವೆನೆಂದ ಕೇಂದ್ರ ಸಚಿವನ ​ಕೇಸ್​ ನಡೆಸದ ಕೋರ್ಟ್​- 20 ವರ್ಷಗಳ ದಾಖಲೆ ಮುರಿದೋಯ್ತು!

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್​ ರದ್ದತಿಗೆ ಕೋರಿದ್ದ ಅರ್ಜಿಯನ್ನು ಮಾನ್ಯ ಮಾಡದ ಮುಂಬೈ ಹೈಕೋರ್ಟ್​, ತುರ್ತಾಗಿ ಈ ಅರ್ಜಿಯ ವಿಚಾರಣೆ ಮಾಡಲಾಗದು ಎಂದು ಹೇಳಿದೆ.

ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಧ್ವಜಾರೋಹಣ ನಡೆಸಿ ಭಾಷಣ ಮಾಡುತ್ತಿದ್ದ ವೇಳೆ ಸ್ವಾತಂತ್ರ್ಯ ಲಭಿಸಿದ ವರ್ಷವನ್ನು ಪಕ್ಕದವರಿಂದ ಕೇಳಿ ತಿಳಿದುಕೊಂಡು ಹೇಳಿದ್ದರು. ಇದನ್ನು ಉಲ್ಲೇಖಿಸಿ ರಾಣೆ ಅವರು, ನಾನಾಗಿದ್ದರೆ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಹೇಳಿಕೆ ನೀಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ನಿರೀಕ್ಷಣಾ ಜಾಮೀನು ನೀಡಲು ಕೋರ್ಟ್​ ನಿರಾಕರಿಸಿದ್ದರಿಂದ ಪೊಲೀಸರು ಅರೆಸ್ಟ್​ ಮಾಡಲು ಬಂದಿದ್ದರು.

ಕೂಡಲೇ ವಕೀಲರ ಮೂಲಕ ಹೈಕೋರ್ಟ್​ಗೆ ದೌಡಾಯಿಸಿದ್ದ ರಾಣೆ ಅವರು ಎಫ್​ಐಆರ್​ ರದ್ದು ಮಾಡುವ ಸಂಬಂಧ ತುರ್ತಾಗಿ ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಪೊಲೀಸರು ರಾಣೆ ಅವರನ್ನು ಬಂಧಿಸಲು ಅವರ ಕಚೇರಿಯ ಹೊರಗಡೆ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಪುರಸ್ಕರಿಸಬೇಕು ಎಂದು ವಕೀಲರು ಕೋರಿಕೊಂಡರು. ಆದರೆ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ಹೀಗೆಲ್ಲಾ ವಿಚಾರಣೆ ಅರ್ಜೆಂಟ್​ ಆಗಿ ನಡೆಸಲು ಆಗುವುದಿಲ್ಲ. ಕಾನೂನಿನ ಪ್ರಕ್ರಿಯೆಯನ್ನು ಸರಿಯಾಗಿ ಅನುಸರಿಸಿ ಸರತಿಯಲ್ಲಿ ಅರ್ಜಿ ಹಾಕಿ ಎಂದು ಹೇಳಿಬಿಟ್ಟರು.

ಇದರಿಂದಾಗಿ ಬಂಧನ ಮಾಡುವುದು ಗ್ಯಾರೆಂಟಿ ಆಗಿದೆ. 20 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರನ್ನು ಪೊಲೀಸರು ಬಂಧಿಸುತ್ತಿರುವುದು ಎನ್ನಲಾಗಿದೆ.