ನ್ಯೂಸ್

ಯುಕ್ರೇನ್​ ನ್ಯಾಟೋ ಸೇರುವ ನಿರ್ಧಾರವೇ ಯುದ್ದಕ್ಕೆ ಕಾರಣ ಎಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್| Vladimir Putin

Vladimir Putin: ಚೀನಾದಲ್ಲಿ ನಡೆಯುತ್ತಿರುವ SCO ಶೃಂಗಸಭೆಯಲ್ಲಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುಕ್ರೇನ್ ಬಿಕ್ಕಟ್ಟನ್ನು ಪರಿಹರಿಸಲು ಭಾರತ ಮತ್ತು ಚೀನಾದ ಪ್ರಯತ್ನಗಳನ್ನು ಶ್ಲಾಘಿಸಿದರು.

ಈ ಬಗ್ಗೆ SEO ಶೃಂಗಸಭೆಯಲ್ಲಿ ಮಾತನಾಡಿದ ಪುಟಿನ್, ಯುಕ್ರೇನ್‌ನಲ್ಲಿನ ಬಿಕ್ಕಟ್ಟಿನ ಮೂಲಕಾರಣಗಳನ್ನು ಪರಿಹರಿಸಬೇಕು. ಅಲ್ಲದೆ, ಭದ್ರತಾ ಸಮತೋಲನವನ್ನು ಸ್ಥಾಪಿಸಬೇಕು ಎಂದು ಪುಟಿನ್​ ಹೇಳಿದರು. ಸಂಘರ್ಷದ ಬಗ್ಗೆ ರಷ್ಯಾದ ನಿಲುವನ್ನು ಪುನರುಚ್ಚರಿಸಿದ ಪುಟಿನ್, ಕೈವ್‌ನಲ್ಲಿನ ಬಿಕ್ಕಟ್ಟಿಗೆ ಪಶ್ಚಿಮಾತ್ಯ ರಾಷ್ಟ್ರಗಳು ಯುಕ್ರೇನ್ ಅನ್ನು NATOಗೆ ಸೇರಿಸಿಕೊಳ್ಳುವ ಪ್ರಯತ್ನವೇ ಒಂದು ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು ಮಾತನಾಡಿದ ರಷ್ಯಾದ ಅಧ್ಯಕ್ಷ, ಈ ಬಿಕ್ಕಟ್ಟು ಆಕ್ರಮಣದ ಪರಿಣಾಮವಾಗಿ ಉದ್ಭವಿಸಿಲ್ಲ. ಬದಲಿಗೆ ಯುಕ್ರೇನ್‌ ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲದೊಂದಿಗೆ ಕೈವ್‌ನಲ್ಲಿ ನಡೆದ ದಂಗೆಯ ಪರಿಣಾಮವಾಗಿ ಉದ್ಭವಿಸಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಯಾವುದೇ ದೇಶವು ಮತ್ತೊಂದು ದೇಶವನ್ನು ಬಲಿಕೊಟ್ಟು ತನ್ನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ತತ್ವವನ್ನು ರಷ್ಯಾ ಪಾಲಿಸುತ್ತದೆ ಎಂದು ಪುಟಿನ್ ತಿಳಿಸಿದ್ದಾರೆ.

ಭಾರತ, ಚೀನಾ ಯುದ್ದ ನಿಲ್ಲಸಲು ಪ್ರಯತ್ನಿಸಿವೆ: ಪುಟಿನ್

ಯುಕ್ರೇನ್‌ನಲ್ಲಿನ ಬಿಕ್ಕಟ್ಟನ್ನು ಪರಿಹರಿಸಲು ಚೀನಾ ಮತ್ತು ಭಾರತದ ಪ್ರಯತ್ನಗಳನ್ನು ಶ್ಲಾಘಿಸುತ್ತೇನೆ ಎಂದು ಪುಟಿನ್ ಹೇಳಿದ್ದಾರೆ. ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರೊಂದಿಗಿನ ತಮ್ಮ ಅಲಾಸ್ಕಾ ಶೃಂಗಸಭೆಯ ಬಗ್ಗೆಯೂ ಪುಟಿನ್​ ಪ್ರಸ್ತಾಪಿಸಿದರು. ಆ ಸಭೆಯ ಫಲಿತಾಂಶಗಳನ್ನು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ವಿಶ್ವದ ಇತರ ನಾಯಕರೊಂದಿಗೆ ಚರ್ಚಿಸಿರುವುದಾಗಿ ಪುಟಿನ್​ ತಿಳಿಸಿದ್ದಾರೆ.

ಟ್ರಂಪ್ ಜೊತೆಗಿನ ಅಲಾಸ್ಕಾ ಶೃಂಗಸಭೆಯಲ್ಲಿ ತಲುಪಿದ ಒಪ್ಪಂದಗಳು ಯುಕ್ರೇನ್‌ನಲ್ಲಿ ಶಾಂತಿಗೆ ದಾರಿ ಮಾಡಿಕೊಡುತ್ತವೆ ಎಂದು ರಷ್ಯಾದ ಅಧ್ಯಕ್ಷರು ದೃಢಪಡಿಸಿದರು. ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಗೌರವ ಸೇರಿದಂತೆ ವಿಶ್ವಸಂಸ್ಥೆಯ ತತ್ವಗಳು ಇಂದಿಗೂ ಮಾನ್ಯವಾಗಿವೆ ಮತ್ತು ಅಚಲವಾಗಿವೆ ಎಂದು ಪುಟಿನ್​ ತಿಳಿಸಿದರು. (ಏಜೆನ್ಸೀಸ್)