ಕೈರೋ: ಸಮುದ್ರ ದಂಡೆಯ ಸಮೀಪ ಸ್ವಿಮ್ಮಿಂಗ್ ಮಾಡುತ್ತಾ ವಿಹರಿಸುತ್ತಿದ್ದ ರಷ್ಯಾ ಮೂಲದ ವ್ಯಕ್ತಿಯ ಮೇಲೆ ಶಾರ್ಕ್ ಒಂದು ದಾಳಿ ನಡೆಸಿ ಕೊಂದಿರುವ ಭಯಾನಕ ಘಟನೆ ಈಜಿಪ್ಟ್ನಲ್ಲಿ ನಡೆದಿದೆ. ಘಟನೆ ಸಂಬಂಧಿಸಿದ ಭೀಕರ ದೃಶ್ಯ ಮೊಬೈಲ್ನಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಜಿಪ್ಟ್ನ ಹುರ್ಘಾಡ ನಗರದಲ್ಲಿರುವ ರೆಡ್ ಸೀ ರೆಸಾರ್ಟ್ನಲ್ಲಿ ಈ ಘಟನೆ ಗುರುವಾರ ನಡೆದಿದೆ. ಪ್ರವಾಸಿಗನ ಮೇಲೆ ದಾಳಿ ಮಾಡಿದ್ದು ಟೈಗರ್ ಶಾರ್ಕ್ ಎಂದು ಈಜಿಪ್ಟ್ನ ಪರಿಸರ ಸಚಿವಾಲಯ ತಿಳಿಸಿದೆ. ಈ ಘಟನೆಯ ಬೆನ್ನಲ್ಲೇ ಅಧಿಕಾರಿಗಳು ಕರಾವಳಿಯ 74 ಕಿಲೋಮೀಟರ್ ವ್ಯಾಪ್ತಿಯನ್ನು ನಿಷೇಧಿಸಿದ್ದು, ಭಾನುವಾರದವರೆಗೆ ಜಲಕ್ರೀಡೆ ಹಾಗೂ ಚಟುವಟಿಕೆಗಳಿಗೆ ನಿರ್ಬಂಧ ಹೇರಿದ್ದಾರೆ. ಆದರೆ, ಮೃತನ ಮಾಹಿತಿ ಬಗ್ಗೆ ಅಲ್ಲಿನ ಸರ್ಕಾರ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಶಾರ್ಕ್ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತನ್ನನ್ನು ಸುತ್ತುವರಿದ ಶಾರ್ಕ್ನಿಂದ ತಪ್ಪಿಸಿಕೊಳ್ಳಲು ರಷ್ಯಾ ವ್ಯಕ್ತಿ ಭಯದಿಂದ ಸಮುದ್ರದಲ್ಲಿ ಈಜಲು ಪರದಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಎರಡ್ಮೂರು ಬಾರಿ ದಾಳಿ ಮಾಡಿ, ಆತನ ಸುತ್ತಲೂ ಸುತ್ತುವ ಶಾರ್ಕ್, ಅಂತಿಮವಾಗಿ ವ್ಯಕ್ತಿಯನ್ನು ನೀರಿನ ಒಳಗೆ ಎಳೆದೊಯ್ಯುತ್ತದೆ. ಓರ್ವ ಲೈಫ್ಗಾರ್ಡ್ ಸಹಾಯಕ್ಕಾಗಿ ಕೂಗಿಕೊಂಡರು ಆತನನ್ನು ರಕ್ಷಿಸಲು ಆತನ ಬಳಿಗೆ ಹೋಗುವಷ್ಟರಲ್ಲಿ ಶಾರ್ಕ್ ಆತನನ್ನು ಎಳೆದುಕೊಂಡು ಹೋಗಿತ್ತು.
ದಾಳಿಯ ಕೆಲವು ಗಂಟೆಗಳ ಬಳಿಕ ಈಜಿಪ್ಟ್ ಪರಿಸರ ಸಚಿವಾಲಯದ ಅಧಿಕಾರಿಗಳು ಶಾರ್ಕ್ ಅನ್ನು ಹಿಡಿದು, ದಾಳಿಗೆ ಕಾರಣ ಏನು ಎಂಬುದನ್ನು ಖಚಿತಪಡಿಸಿಕೊಳ್ಳಲು ಪರಿಶೀಲಿಸುತ್ತಿದ್ದಾರೆ. ಹುರ್ಘಾಡದಲ್ಲಿರುವ ರಷ್ಯಾದ ರಾಯಭಾರ ಕಚೇರಿಯು ಮೃತ ವ್ಯಕ್ತಿಯು ರಷ್ಯಾ ಮೂಲದವನು ಎಂದು ಪತ್ತೆಹಚ್ಚಿದೆ. ಆದರೆ, ಆತನ ಹೆಸರು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ರಷ್ಯಾ ವ್ಯಕ್ತಿ 1999ರಲ್ಲಿ ಜನಿಸಿದವನಾಗಿದ್ದು, ಈಜಿಪ್ಟ್ನಲ್ಲೇ ಪೂರ್ಣ ಸಮಯದಿಂದ ವಾಸವಿದ್ದ ಎಂದು ತಿಳಿಸಿದೆ.
ರಷ್ಯಾದ ಪ್ರವಾಸಿಗರು ನೀರಿನಲ್ಲಿದ್ದಾಗ ಜಾಗರೂಕರಾಗಿರಬೇಕು ಮತ್ತು ಸ್ಥಳೀಯ ಅಧಿಕಾರಿಗಳು ವಿಧಿಸಿರುವ ಯಾವುದೇ ಈಜು ನಿಷೇಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ರಷ್ಯಾ ರಾಯಭಾರ ಕಚೇರಿ ಎಚ್ಚರಿಸಿದೆ. (ಏಜೆನ್ಸೀಸ್)